ಫೊಟೋ ಶೂಟ್ ಮೋಜಿಗೆ ಬಲಿಯಾದ ಯುವಕ : ಕುಟುಂಬಸ್ಥರ ಆಕ್ರಂದನ
ದಾವಣಗೆರೆ: ಇತ್ತೀಚೆಗೆ ಜನ ತಮ್ಮ ಜೀವನದಲ್ಲಿ ಬದಲಾವಣೆ ಕೇಳ್ತಿದಾರೆ. ಎಲ್ಲದಕ್ಕೂ ಹೊಸ ಜೀವನವನ್ನು ಹುಡುಕುತ್ತಿದ್ದಾರೆ. ಟ್ರೆಂಡ್ ತಂತ್ರಜ್ಞಾನ ಮೊರೆ ಹೋಗುತ್ತಿದ್ದಾರೆ. ಸಿಕ್ಕ ಸಿಕ್ಕಲೆಲ್ಲಾ ಮೊಬೈಲ್ ಕ್ಯಾಮೆರಾ ಹಿಡಿದು ಫೋಟೊ ಕ್ಲಿಕ್ಕಿಸಿಕೊಳ್ಳುವ ಕಾಲದಲ್ಲಿ ಸೆಲ್ಫಿ ಮೋಜಿಗೆ ಬಲಿಯಾದ ಉದಾಹರಣೆಗಳೂ ಸಾಕಷ್ಟಿವೆ. ಒಂದು ಫೋಟೋಗಾಗಿ ಜೀವನವನ್ನು ಯಾಕೆ ಅಂತ್ಯವಾಗಿಸಿಕೊಳ್ತಾರೋ ಆ ದೇವರೇ ಬಲ್ಲ.
ಇಂದು ಕೂಡ ಬದುಕಿ ಬಾಳಬೇಕಿದ್ದ ಯುವಕನೊಬ್ಬ ಫೋಟೋ ಕ್ರೇಜಿಗೆ ಬಲಿಯಾಗಿದ್ದಾನೆ. ರೈಲ್ವೆ ಹಳಿ ಮೇಲೆ ಲೊಕೇಷನ್ ಚೆನ್ನಾಗಿದೆ ಎಂದು ಫೋಟೋಶೂಟ್ ಮಾಡಿಸಿಕೊಳ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ ಘಟನೆ ದಾವಣಗೆರೆಯ ಡಿಸಿಎಂ ಟೌನ್‌ಶಿಪ್ ಬಳಿ ನಡೆದಿದೆ. ಹದಿನಾರು ವರ್ಷದ ಯುವಕ ಸಚಿನ್ ಮೃತ ದುರ್ದೈವಿ.
ಘಟನಾ ಸ್ಥಳದಲ್ಲಿ ಎರಡು ರೈಲ್ವೆ ಹಳಿಗಳಿದ್ದು, ರೈಲು ಬೇರೆ ಹಳಿ ಮೇಲರ ಬರ್ತಿದೆ ಎಂದು ತಿಳಿದು ಅಲ್ಲೇ ನಿಂತಿದ್ದಾನೆ. ದುರದೃಷ್ಟವಶಾತ್ ರೈಲು ಸಚಿನ್ ನಿಂತಿದ್ದ ಹಳಿ ಮೇಲೆ ಬಂದು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.