Districts

ಅಯೋಧ್ಯೆಯಲ್ಲಿ ಪ್ರತಿಷ್ಠಾನೆಯಾಗೋದು ಮೈಸೂರಿನ ಕಲಾವಿದ ತಯಾರಿಸಿ ಮೂರ್ತಿ!

ಮೈಸೂರು; ಜನವರಿ 22ರಂದು ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಇದಕ್ಕೆ ಮೈಸೂರಿನ ಕಲಾವಿದ ಅರುಣ್‌ ಯೋಗಿರಾಜ್‌ ತಯಾರಿಸಿರುವ ಮೂರ್ತಿ ಆಯ್ಕೆಯಾಗಿದೆ. ಮೈಸೂರಿನ ಅರುಣ್​ ಅವರೊಂದಿಗೆ ಬೆಂಗಳೂರಿನ ಜಿ,ಎಲ್,ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಮೂರ್ತಿಗಳನ್ನು ಕೆತ್ತನೆ ಮಾಡಿದ್ದರು. ಇದರಲ್ಲಿ ಮೈಸೂರಿನ ಕಲಾವಿದನ ಮೂರ್ತಿ ಆಯ್ಕೆ ಮಾಡಲಾಗಿದೆ. 51 ಇಂಚು ಎತ್ತರದ ಮೂರ್ತಿ ಇದಾಗಿದ್ದು, ಒಟ್ಟು ಮೂರ್ತಿಯ ಗ್ರಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ.

ಈ ರಾಮನ ವಿಗ್ರಹವನ್ನು ಕೆತ್ತಿದವರು ನಮ್ಮ ಮೈಸೂರಿನ ಕಲಾವಿದ ಅರುಣ್‌ ಯೋಗಿರಾಜ್‌. ಎಂಬಿಎ ಪದವೀಧರರಾಗಿರುವ ಅರುಣ್ ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2008ರಿಂದ ಈವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಪ್ರತಿಮೆಗಳನ್ನು ಕತ್ತನೆ ಮಾಡಿದ್ದಾರೆ. ಇವರ ಕೈಯಲ್ಲಿ ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆಯ ಕೃಷ್ಣಶಿಲೆ ರಾಮನ ಅವತಾರ ಎತ್ತಿದೆ. ಹೌದು, ಅಯೋಧ್ಯೆಯಲ್ಲಿ ಜನವರಿ 22ರಂದು ಪ್ರತಿಷ್ಠಾಪನೆಯಾಗುವ  ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿರೋ ಕಲ್ಲು ನಮ್ಮ ಕರ್ನಾಟಕದ್ದು.  ಅದೂ ಕೂಡಾ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ಬಳಿಯ ಬುಜ್ಜೆಗೌಡನಪುರ ಗ್ರಾಮದಿಂದ ತಂದಿರುವ ಕಲ್ಲು. ಈ ಗ್ರಾಮದ ಬಳಿ ಸಿಗುವ ಈ ಕೃಷ್ಣ ಶಿಲೆಯನ್ನು ಆ್ಯಸಿಡ್, ನೀರು, ಬೆಂಕಿಯಿಂದಲೂ ನಾಶ ಮಾಡಲು ಆಗುವುದಿಲ್ಲ. ಇದು ಸಂಪೂರ್ಣ ರಸ್ಟ್‌ ಪ್ರೂಫ್‌ ಕೂಡಾ.

ಕರ್ನಾಟಕದಲ್ಲಿ ಹೆಚ್‌ಡಿ ಕೋಟೆ ಹಾಗೂ ಹಾಸನದಲ್ಲಿ ಇಂತಹ ಕೃಷ್ಣಶಿಲೆ ಸಿಗುತ್ತದೆ. ಆದ್ರೆ ಹಾಸನದಲ್ಲಿ ಸಿಗುವ ಕೃಷ್ಣಶಿಲೆ ಅಷ್ಟೊಂದು ಕ್ವಾಲಿಟಿ ಇಲ್ಲ. ಆದ್ರೆ, ಹೆಚ್‌ಡಿ ಕೋಟೆ ಬಳಿ ಸಿಗುವ ಕಲ್ಲು ಅತ್ಯಂತ ಉತ್ಕೃಷ್ಟವಾದುದು. ಇಂತಹ ಕಲ್ಲು ಬೇರೆಲ್ಲೂ ಸಿಗೋದಿಲ್ಲ. ಕಬ್ಬಿಣ ಕೂಡಾ 850 ಡಿಗ್ರಿಯಲ್ಲಿ ಕಾಯಿಸಿದರೆ ಕರಗಿ ಹೋಗುತ್ತೆ. ಆದ್ರೆ ಈ ಕೃಷ್ಣ ಶಿಲೆ ಕರಗೋದಿಲ್ಲ, ಸಿಡಿಯೋದಿಲ್ಲ. ಅಷ್ಟೇ ಏಕೆ ಈ ಶಿಲೆಯ ಮೇಲೆ ಆ್ಯಸಿಡ್ ಹಾಕಿದರೂ ಅದು ಒಂದು ಚೂರೂ ಏನೂ ಆಗುವುದಿಲ್ಲ.

ಮಳೆ, ಗಾಳಿ, ಬಿಸಿಲಿಗೂ ಈ ಕೃಷ್ಣ ಶಿಲೆ ಕೇರ್‌ ಮಾಡೋದಿಲ್ಲ. ಮೈಸೂರು ಅರಮನೆಯಲ್ಲಿರುವ ಮೂರ್ತಿಗಳು ಇದೇ ಕೃಷ್ಣ ಶಿಲೆಯಲ್ಲೇ ಮಾಡಿರುವುದು.  ಶಂಕರಾಚಾರ್ಯರ ಮೂರ್ತಿಯನ್ನು ತಯಾರಿಸಿದ್ದು ಕೂಡಾ ಹೆಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಅಂತೆ.

ಈ ಶಿಲೆ ಎಲ್ಲಾ ಕಾಲದಲ್ಲೂ ಒಂದೇ ಟೆಂಪರೇಚರ್ ಇರುತ್ತೆ. ಈ ಕಾರಣದಿಂದ ವಿದೇಶಗಳಲ್ಲಿ ಇದನ್ನ ಸೀಲಿಂಗ್​ಗೆ ಬಳಸುತ್ತಾರಂತೆ. ಇದರಿಂದ ಚಳಿ, ಮಳೆ, ಬೇಸಿಗೆ ಎಲ್ಲಾ ಸಂದರ್ಭದಲ್ಲೂ ಒಂದೇ ವಾತಾವರಣ ಇರುತ್ತದಂತೆ. ಹೀಗಂತ, ಕಲಾವಿದನ ಕುಟುಂಬದವರು ತಿಳಿಸಿದ್ದಾರೆ.

 

Share Post