BengaluruPolitics

30 ವರ್ಷ‌ ಹಳೆಯ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನ; ಹೋರಾಟದ ಎಚ್ಚರಿಕೆ ನೀಡಿದ ಆರ್‌.ಅಶೋಕ್‌

ಬೆಂಗಳೂರು; ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ‌ ದೇವಾಲ‌ಯ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರುಜೀವ ಬಂದಿದೆ.‌ ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕರಸೇವೆಗೂ ಮುನ್ನ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ‌ ಪ್ರಕರಣದಲ್ಲಿ 9 ಜನರ ವಿರುದ್ಧ ಶಹರ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌.ಅಶೋಕ್‌ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಕಚೇರಿ ಪೂಜೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಐತಿಹಾಸಿಕ ಕ್ಷಣಕ್ಕೆ ಜನರು ಕಾಯುತ್ತಿದ್ದು, ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬಂತೆ ಬಿಂಬಿಸುತ್ತಿದೆ. ಇದೇ ವೇಳೆ ಹುಬ್ಬಳ್ಳಿಯಿಂದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರನ್ನು 30 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಜೈಲಿಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟನೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಸರ್ಕಾರ ಕೈಗೊಂಡಿದೆ. ನಾನು ಕೂಡ ಆಗ ಹೋರಾಟದಲ್ಲಿ ಭಾಗವಹಿಸಿದ್ದು, ನನ್ನನ್ನೂ ಬಂಧಿಸುತ್ತೀರಾ? ಅಷ್ಟು ಧೈರ್ಯ ಇದೆಯಾ? ಎಂದು ಪ್ರಶ್ನೆ ಮಾಡಿದರು.

ಕಾರ್ಯಕರ್ತರ ಮೇಲೆ ಹಾಕಿದ ಕೇಸು ವಾಪಸ್ ಪಡೆಯಬೇಕು. ಹಳೆಯ ಪ್ರಕರಣ ಹೊರತೆಗೆದು ಬಂಧಿಸಲು ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯಿಂದ ಪ್ರತಿಭಟಿಸಲಾಗುವುದು‌ ಎಂದು ಎಚ್ಚರಿಕೆ ನೀಡಿದರು‌.

Share Post