ರಮೇಶ್‌ಕುಮಾರ್ ಆಪ್ತನ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಗುಂಡೇಟು..!
ಕೋಲಾರ; ನಿನ್ನೆ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಎಂ.ಶ್ರೀನಿವಾಸ್ ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಹೋದ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ.
ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ಸಾಗರ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್, ಮುನೀಂದ್ರ ಹಾಗೂ ಸಂತೋಷ್ ಬಂಧಿತ ಆರೋಪಿಗಳು. ಪೊಲೀಸರು ಮೂವರನ್ನೂ ಬಂಧಿಸಿ ಕರೆತರುವಾಗ, ಪ್ರಮುಖ ಆರೋಪಿ ವೇಣುಗೋಪಾಲ್ ಹಾಗೂ ಮುನೀಂದ್ರ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಹೀಗಾಗಿ, ಪೊಲೀಸರು ಇಬ್ಬರ ಕಾಲಿಗೂ ಗುಂಡು ಹಾರಿಸಿದ್ದಾರೆ. ಈ ವೇಳೆ ಮೂರನೇ ಆರೋಪಿ ಸಂತೋಷ್‌ಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆರೋಪಿಗಳು ಹಲ್ಲೆ ನಡೆಸಿದ್ದರಿಂದಾಗಿ ಇನ್ಸ್‌ಪೆಕ್ಟರ್ ವೆಂಕಟೇಶ್, ಪೊಲೀಸ್ ಸಿಬ್ಬಂದಿಯಾದ ಮಂಜುನಾಥ್ ಮತ್ತು ನಾಗೇಶ್ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಆರು ಜನ ದುಷ್ಕರ್ಮಿಗಳು ಪರಿಚಯಸ್ಥರಂತೆ ಮಾತಾಡಿಸಿ ಚಾಕು ಇರಿದು ಶ್ರೀನಿವಾಸ್‌ರನ್ನು ಹತ್ಯೆ ಮಾಡಿದ್ದರು. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.