ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದು ಕಾಂಗ್ರೆಸ್ ನಾಯಕಿ ಮನೆಯಲ್ಲಿ..!
ಬೆಂಗಳೂರು; ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಬಂಧಿತವಾಗಿದ್ದಾಳೆ. ಈಕೆ ಕಳೆದು ಏಳು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಇದೀಗ ಆಕೆ ಉಡುಪಿಯಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ವಿಚಿತ್ರ ಅಂದ್ರೆ ಚೈತ್ರಾ ಕುಂದಾಪುರಗೆ ತಲೆಮರೆಸಿಕೊಳ್ಳಲು ಜಾಗ ಕೊಟ್ಟಿದ್ದದ್ದು ಕಾಂಗ್ರೆಸ್ ನಾಯಕಿ ಅದರಲ್ಲೂ ಮುಸ್ಲಿಂ ಮಹಿಳೆ ಅನ್ನೋದು ಖಾತ್ರಿಯಾಗಿದೆ.
ಉಡುಪಿಯ ಕಾಂಗ್ರೆಸ್ ನಾಯಕಿ ಹಾಗೂ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಂ ಎಂಬುವವರೇ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದವರು. ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಸುಮಾರು 5 ಕೋಟಿ ರೂಪಾಯಿ ಪಡೆದು ಚೈತ್ರ ಕುಂದಾಪುರ ವಂಚಿಸಿದ್ದರು. ಈ ಸಂಬಂಧ ಗೋವಿಂದ ಬಾಬು ಪೂಜಾರಿ ಕೇಸ್ ದಾಖಲಿಸಿದ್ದರು. ಪೊಲೀಸರು ನೋಟಿಸ್ ನೀಡಿದಾಗ ಚೈತ್ರ ತಲೆಮರೆಸಿಕೊಂಡಿದ್ದಳು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಕಾಂಗ್ರೆಸ್ ನಾಯಕಿ ಅಂಜುಂ ಅವರ ಮನೆಯಲ್ಲಿ ಅಡಗಿ ಕುಳಿತಿದ್ದಳು. ಉಡುಪಿ ಅಪಾರ್ಟ್‌ಮೆಂಟ್ ಒಂದರಲ್ಲಿ ಅಂಜುಂ ಮನೆ ಇದ್ದು, ಅಲ್ಲಿ ಚೈತ್ರಾ ಇದ್ದಳು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಂಜುಂ ಅವರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.