ಸಿಎಂ ತವರು ಕ್ಷೇತ್ರದಲ್ಲಿ ಗುಂಡಿನ ಮೊರೆತ; ಮಹಿಳೆಯ ಮೇಲೆ ದುಷ್ಕರ್ಮಿಗಳ ದಾಳಿ
ಹಾವೇರಿ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಹಲಗೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಹತ್ಯಾಯತ್ನ ನಡೆದಿದ್ದು, ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುವ ಸಮಯಕ್ಕೆ ವಿದ್ಯುತ್ ಕಟ್ ಆಗಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ.
ಹಲಗೂರು ಗ್ರಾಮದ ಆಜಾದ್ ಗಲ್ಲಿಯಲ್ಲಿ ವಾಸವಿರುವ ಸಲ್ಮಾ ಎಂಬುವವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕಳೆದ ರಾತ್ರಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಸಲ್ಮಾ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಆದ್ರೆ ಸಲ್ಮಾ ತಪ್ಪಿಸಿಕೊಂಡು ಮನೆಯೊಳಗೆ ಓಡಿಹೋಗಿದ್ದಾರೆ. ಅಷ್ಟರಲ್ಲಿ ವಿದ್ಯುತ್ ಕೂಡಾ ಕಟ್‌ದ ಆಗಿದೆ. ಇದರಿಂದಾಗಿ ದುಷ್ಕರ್ಮಿ ಕತ್ತಲಿನಲ್ಲಿ ಎಲ್ಲೆಂದರಲ್ಲಿ ಗುಂಡು ಹಾರಿಸಿದ್ದಾರೆ. ಆದ್ರೆ ದುಷ್ಕರ್ಮಿಗಳು ಹಾರಿಸಿದ ಆರು ಗುಂಡುಗಳೂ ಗೋಡೆಗೆ ತಗುಲಿವೆ.
ಸಲ್ಮಾಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಅವರಿಗೆ ಮೂವರು ಮಕ್ಕಳು ಕೂಡಾ ಇದ್ದಾರೆ. ಆದ್ರೆ ಪತಿ ಜೊತೆ ಜಗಳ ಮಾಡಿಕೊಂಡಿದ್ದ ಸಲ್ಮಾ, ಎರಡು ವರ್ಷಗಳಿಂದ ಹುಲಗೂರು ಗ್ರಾಮದ ತವರು ಮನೆಯಲ್ಲೇ ವಾಸವಿದ್ದಾರೆ. ಮನೆಯಲ್ಲಿ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣತಮ್ಮಂದಿರು ಸೇರಿದಂತೆ ಒಟ್ಟು ಹದಿನಾಲ್ಕು ಮಂದಿ ವಾಸವಿದ್ದಾರೆ. ಕಳೆದ ತಿಂಗಳು ಇದೇ ಸಿಎಂ ಕ್ಷೇತ್ರ ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಈ ಘಟನೆ ಹಸಿರಾಗಿರುವಾಗಲೇ ಮತ್ತೆ ಗಂಡುನ ಸದ್ದು ಕೇಳಿಬಂದಿದೆ. ಇದು ಶಿಗ್ಗಾಂವಿ ಜನರ ಆತಂಕಕ್ಕೆ ಕಾರಣವಾಗಿದೆ.