ರೈತರ ಧರಣಿ ಹಿನ್ನೆಲೆ; ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ತಡೆ
ಮಂಡ್ಯ; ಕಲ್ಲು ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಹಾನಿಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ನಡೆಸಿದ್ದರು. ಆದ್ರೆ ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಅಧಿಕಾರಿಗಳು ತಾತ್ಕಾಲಿಕ ತಡೆ ನೀಡಿದ್ದಾರೆ.
ಸಂಸದೆ ಸುಮಲತಾ ಅವರು ಟ್ರಯಲ್ ಬ್ಲಾಸ್ಟ್ ಬೇಡ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಆದ್ರೆ ಈಗ ಬ್ಲಾಸ್ಟಿಂಗ್ ತಾತ್ಕಾಲಿಕ ತಡೆ ನೀಡಿರುವುದರಿಂದ ಅಹೋರಾತ್ರಿ ಧರಣಿಯನ್ನು ವಾಪಸ್ ಪಡೆಯಲಾಗಿದೆ. ಆದ್ರೆ ಟ್ರಯಲ್ ಬ್ಲಾಸ್ಟ್ ಬಗ್ಗೆ ಸ್ಪಷ್ಟ ತೀರ್ಮಾನ ಬರುವವರೆಗೆ ಹೋರಾಟ ಮುಂದುವರಿಯಲಿದ್ದು, ಕೆಆರ್ಎಸ್ ಹಾಗೂ ಬೇಬಿ ಬೆಟ್ಟದ ಸುತ್ತಮುತ್ತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಇಂದು ಕೆಆರ್ಎಸ್ ಬಳಿಯ ಕಟ್ಟೇರಿಯ ಬಳಿ ಸಂಪೂರ್ಣ ಟ್ರಯಲ್ ಬ್ಲಾಸ್ಟ್ ನಿಷೇಧವಾಗಬೇಕೆಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಡಳಿತದ ನಿಲುವು ಬರುವವರೆಗೆ ಪ್ರತಿಭಟನೆ ಮುಂದುವರಿಯಲಿದ್ದು, ದಿನಕ್ಕೊಂದು ವಿಭಿನ್ನ ಪ್ರತಿಭಟನೆ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಂತೆಯೇ ರಾಜವಂಶಸ್ಥೆ ಪ್ರಮೋದಾದೇವಿ ಕೂಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗಣಿ ಸಚಿವರಿಗೆ ಪತ್ರ ಬರೆದಿದ್ದಾರೆ.