ತಪ್ಪಾಯ್ತು ಗುಂಡು ಹಾರಿಸಿ ಸಾಯಿಸಿ; ಜೈನಮುನಿ ಹತ್ಯೆ ಆರೋಪಿ ಪಶ್ಚಾತ್ತಾಪ
ಬೆಳಗಾವಿ; ಇತ್ತೀಚೆಗಷ್ಟೇ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ನಾರಾಯಣ ಮಾಳಿ ಹಾಗೂ ಹಸನ್ ದಲಾಯತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಎ1 ಆರೋಪಿ ನಾರಾಯಣ ಮಾಳಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. ನಾನು ತಪ್ಪು ಮಾಡಿದ್ದೇನೆ. ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ನನ್ನನ್ನು ಗುಂಡು ಹಾರಿಸಿ ಕೊಂದುಬಿಡಿ ಎಂದು ಪೊಲೀಸರ ಮುಂದೆ ಅಂಗಲಾಚಿದ್ದಾನೆ.
ಪೊಲೀಸರು ಇಬ್ಬರೂ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಪ್ರಮುಖ ಆರೋಪಿ ನಾರಾಯಣ ಮಾಳಿ, ನಾನು ತಪ್ಪು ಮಾಡಿದ್ದೇವೆ. ನೀವೇ ಗುಂಡು ಹಾರಿಸಿ ಸಾಯಿಸಿಬಿಡಿ, ಇಲ್ಲವೇ ನಾನೇ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇನ್ನೊಂದೆಡೆ ಜೈನಮುನಿಯ ಪರ್ಸನಲ್ ಡೈರಿ ಕೂಡಾ ತಾನೇ ಸುಟ್ಟು ಹಾಕಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ. ಇತ್ತ ಮುಂಜಾಗ್ರತಾ ಕ್ರಮವಾಗಿ ಆರೋಪಿ ನಾರಾಯಣ ಮಾಳಿ ಕುಟುಂಬಸ್ಥರು ಬೇರೆ ಕಡೆ ಶಿಫ್ಟ್ ಮಾಡಿದ್ದಾರೆ.
ನಾರಾಯಣ ಮಾಳಿ ಕುಟುಂಬಸ್ಥರನ್ನು ಶಿಫ್ಟ್ ಮಾಡಿರುವುದರಿಂದ ಅವರ ಎರಡು ಆಕಳು, ಎರಡು ಎಮ್ಮೆ, ೨೦ಕ್ಕೂ ಹೆಚ್ಚು ಮೇಕೆಗಳಿಗೆ ಪೊಲೀಸರೇ ಮೇವು ಕತ್ತರಿಸಿ ಹಾಕುತ್ತಿದ್ದಾರೆ.