Districts

ನಿನ್ನೆಯಷ್ಟೇ ಪೋಷಕರಿಗೆ ಕರೆ ಮಾಡಿದ್ದ ನವೀನ್‌; ನಾವೆಲ್ಲಾ ಸಂಕಷ್ಟದಲ್ಲಿದ್ದೇವೆ ಎಂದು ಗೋಳಾಡಿದ್ದ

ಹಾವೇರಿ: ಉಕ್ರೇನ್‌ನ ಖಾರ್ಕೀವ್‌ನಲ್ಲಿ ರಷ್ಯಾ ಶೆಲ್‌ ದಾಳಿಗೆ ತುತ್ತಾಗಿರುವ ವಿದ್ಯಾರ್ಥಿ ನವೀನ್‌, ನಿನ್ನೆಯಷ್ಟೇ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ನವೀನ್‌ ದೊಡ್ಡಪ್ಪ ಉಜ್ಜನಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ ನಮಗೆ ನವೀನ್‌ ಕರೆ ಮಾಡಿದ್ದ. ನಾವೆಲ್ಲಾ ಇಲ್ಲಿ ತುಂಬಾ ಸಂಕಷ್ಟದಲ್ಲಿದ್ದೇವೆ ಎಂದು ಹೇಳಿದ್ದ. ಇಂದು ನೋಡಿದರೆ, ಆಘಾತಕಾರಿ ಸುದ್ದಿ ಸಿಕ್ಕಿದೆ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ನವೀನ್‌ ಸ್ನೇಹಿತರು ಈ ವಿಷಯವನ್ನು ನಮಗೆ ತಿಳಿಸಿದರು. ನಂತರ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ನವೀನ್‌ ಸೇರಿ ಹಲವು ವಿದ್ಯಾರ್ಥಿಗಳಿಗೆ ಭಾರತದ ಎಂಬಸಿಯಿಂದ ಮೆಸೇಜ್‌ ಬಂದಿತ್ತು. ನೀವು ಕೂಡಲೇ ಹೊರಬನ್ನಿ ಭಾರತಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು. ಆದ್ರೆ ಖಾರ್ಕೀವ್‌ನಲ್ಲಿ ರಷ್ಯಾ ಭೀಕರ ಶೆಲ್‌ ದಾಳಿ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಭಯದಿಂದ ಯಾರೂ ಹೊರಬಂದಿರಲಿಲ್ಲ. ಆದರೆ ನವೀನ್‌ ಮಾತ್ರ ಸೂಪರ್‌ ಮಾರ್ಕೆಟ್‌ ಹೋಗುತ್ತೇನೆ. ಅಲ್ಲಿಂದ ಭಾರತದ ಎಂಬಸಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿಹೋಗಿದ್ದ. ಆದ್ರೆ ಇದೇ ಶೆಲ್‌ ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ವಿದ್ಯಾರ್ಥಿ ಹೇಳುವ ಪ್ರಕಾರ ನವೀನ್‌ ತಿಂಡಿ ತರಲೆಂದು ಸೂಪರ್‌ ಮಾರ್ಕೆಟ್‌ಗೆ ಹೋಗಿದ್ದ. ನಾವು ಬೇಡ ಎಂದೆವು. ಆದರೂ ಕೇಳದೆ ಹೋಗಿದ್ದ. ಈ ಸಮಯದಲ್ಲೇ ಶೆಲ್‌ ದಾಳಿಯಾಗಿದೆಯಂತೆ.

ನವೀನ್‌ ಮೈಸೂರಿನ ನಂಜನಗೂಡಿನಲ್ಲಿದ್ದುಕೊಂಡು ಪಿಯುಸಿವರೆಗೂ ಓದಿದ್ದ ಎಂದು ತಿಳಿದು ಬಂದಿದೆ. ಉತ್ತಮ ನಡವಳಿಕೆಯ ಹಾಗೂ ರ್ಯಾಂಕ್‌ ವಿದ್ಯಾರ್ಥಿಯಾಗಿದ್ದ ಎಂದು ಅವರ ಪೋಷಕರು ಹೇಳಿದ್ದಾರೆ.

 

Share Post