Districts

ಕಾಂಗ್ರೆಸ್‌ ನಾಯಕರು ದೇಶದ್ರೋಹಿಗಳು, ಹಿಜಾಬ್ ಸಂಬಂಧ ಅವರಲ್ಲೆ ಗೊಂದಲ ಇದೆ: ರೇಣುಕಾಚಾರ್ಯ

ದಾವಣಗೆರೆ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಕೆಲ ಶಾಸಕರ ಬೆಂಬಲ ಇಲ್ಲ. ಕಾಂಗ್ರೆಸ್ ನ 67 ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆದ್ರೆ ಕೆಲ ಶಾಸಕರು ಹಿಜಾಬ್ ಗೆ ನಮ್ಮ ಬೆಂಬಲ ಇಲ್ಲ ಎಂದಿದ್ದಕ್ಕೆ ಬಲವಂತವಾಗಿ ವಿಪ್ ಜಾರಿ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ.‌ ಕಾಂಗ್ರೆಸ್ ಪಕ್ಷದಲ್ಲಿ ಸಂಘರ್ಷ ಇದೆ. ಇದನ್ನು ಮರೆಮಾಚಲು ರಾಷ್ಟ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪರ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ಕೆ. ಎಸ್. ಈಶ್ವರಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಈಶ್ವರಪ್ಪ ಅವರು ರಾಷ್ಟ್ರದ್ರೋಹ ಕೆಲಸ ಮಾಡಿಲ್ಲ. ಅವರೊಬ್ಬ ರಾಷ್ಟ್ರಭಕ್ತ. ಕಾಂಗ್ರೆಸ್ ನವರು ದೇಶದ್ರೋಹಿಗಳು ಎಂದು ಹೊನ್ನಾಳಿ ಪಟ್ಟಣದಲ್ಲಿ ರೇಣುಕಾಚಾರ್ಯ ಆರೋಪ ಮಾಡಿದ್ರು.

ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ, ರ್ಯಾಲಿ, ಹೋರಾಟ ಮಾಡಿದ ಅಭ್ಯಾಸ ಬಿಜೆಪಿಗಿದೆ. ಆದ್ರೆ ಕಾಂಗ್ರೆಸ್ ನವರಿಗೆ ಲೂಟಿ ಹೊಡೆದ ಅಭ್ಯಾಸ ಇದೆ. ಈಗ ನಿಮ್ಮ ಪ್ರತಿಭಟನೆ ಯಶಸ್ವಿಯಾಗಲ್ಲ. ನೀವು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನ ಬಳಿ ತರಬೇತಿ ಪಡೆದು ಬಳಿಕ ಹೋರಾಟ ಮಾಡಿದರೆ ಯಶಸ್ಸು ಸಿಗುತ್ತದೆ. ಕಾಂಗ್ರೆಸ್ ನವರ ಹಾಗೆ ಬೇಕಾಬಿಟ್ಟಿ ಹೋರಾಟ. ಇದಕ್ಕೆ ಬಿಜೆಪಿ ಸರ್ಕಾರ ಯಾವುದಕ್ಕೂ ತಲೆಕೆಡಿಕೊಳ್ಳುವುದಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡಿದ ಕಾಂಗ್ರೆಸ್ ಈಗ ಅಡ್ರೆಸ್ ಇಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನ ಶಾಸಕರ ಬೆಂಬಲ ಆ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಮುಖಂಡರ ನಡುವೆ ಸಂಘರ್ಷ ಇದೆ. ಇದನ್ನು ಮರೆಮಾಚಲು ರಾಷ್ಟ್ರಧ್ವಜದ ಹೆಸರಿನಲ್ಲಿ ಈಶ್ವರಪ್ಪನವರ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದ್ದೀರಿ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರು ಕಾಂಗ್ರೆಸ್ ನವರು ಅವಮಾನ ಮಾಡಿದ್ದು, ಮೊದಲು ಕ್ಷಮೆ ಕೇಳಬೇಕು. ಅಧಿವೇಶನದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಹೇಳಿದರು.

ನಾವು ಅಲ್ಪಸಂಖ್ಯಾತರ ವಿರುದ್ಧ ಇಲ್ಲ. ಭಾರತದಲ್ಲಿ ಹುಟ್ಟಿ ಪಾಕಿಸ್ತಾನ ಜಿಂದಾಬಾದ್ ಎಂದರೆ ಸಹಿಸಲ್ಲ. ನಾಳೆ ಏನು ಬೇಕಾದರೂ ಪ್ರತಿಭಟನೆ ಮಾಡಿ. ಈಶ್ವರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ವಿಧಾನಸೌಧ ದೇವರ ಗುಡಿ. ಜನರ ಸಮಸ್ಯೆ ಬಗೆಹರಿಸಲು ಚರ್ಚಿಸಲು ಇರುವ ತಾಣ. 2023ಕ್ಕೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ಜನರು ನಿರ್ಧರಿಸಿದ್ದಾರೆ. ಜನರ ತೆರಿಗೆ ಹಾಗೂ ಸರ್ಕಾರದ ಹಣ ಪೋಲಾಗುತ್ತದೆ. ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಿ. ಸರ್ಕಾರಕ್ಕೆ ಸಲಹೆ‌ ಕೊಡಿ ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

Share Post