ಈಶ್ವರ ಲಿಂಗ, ಬಸವಣ್ಣ ಮೂರ್ತಿ ಭಗ್ನ; ದುಷ್ಕರ್ಮಿಗಳ ಕೃತ್ಯಕ್ಕೆ ಕಾರಣ ಏನು..?
ರಾಯಚೂರು; ದುಷ್ಕರ್ಮಿಗಳು ಈಶ್ವರನ ಲಿಂಗ ಹಾಗೂ ಬಸವಣ್ಣ ಮೂರ್ತಿಗಳನ್ನ ಭಗ್ನ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕರಡಕಲ್ಲನಲ್ಲಿ ನಡೆದಿದೆ. ಬಿಲ್ಲಮರಾಜನ ಬೆಟ್ಟದ ಕೆಳಭಾಗದ ಗುರುಲಿಂಗೇಶ್ವರ ಕರ್ತೃ ಗದ್ದುಗೆ ಬಳಿ ಇದ್ದ ಈಶ್ವರನ ಲಿಂಗ ಹಾಗೂ ಬಸವಣ್ಣನ ಮೂರ್ತಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
ಬಸವಣ್ಣನ ಮೂರ್ತಿಯ ಕುತ್ತಿಗೆಯನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಇನ್ನು ಈಶ್ವರ ಮೂರ್ತಿಯ ಮೇಲ್ಬಾಗದಲ್ಲಿ ಹಾನಿ ಮಾಡಲಾಗಿದೆ. ಜೊತೆಗೆ ಗುರುಲಿಂಗೇಶ್ವರ ಕರ್ತೃ ಗದ್ದುಗೆಯ ಹಿಂಭಾಗದಲ್ಲಿ ಆಳವಾದ ಗುಂಡಿಯನ್ನು ತೋಡಲಾಗಿದೆ. ಇದನ್ನು ನೋಡಿದರೆ ನಿಧಿಗಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಲಿಂಗಸೂಗೂರು ಭಾಗದಲ್ಲಿ ಇತ್ತೀಚೆಗೆ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಹಳೇ ದೇವಸ್ಥಾನಗಳು, ಕಟ್ಟಡಗಳು ಸಿಕ್ಕರೆ ಅಲ್ಲಿ ನಿಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಧಿಗಾಗಿ ಮೂರ್ತಿಗಳನ್ನು ಭಗ್ನಗೊಳಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.