ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಅನುಷ್ಠಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ: ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಸಿಎಂ, ರಾಜ್ಯದ ಎಲ್ಲ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಲಾಗುವುದು ಎಂದು ತಿಳಿಸಿದರು. ಬೆಳಗಾವಿ ಸೇರಿದಂತೆ ರಾಜ್ಯದ ಇತರ ಕಡೆಯ ರಿಂಗ್ ರಸ್ತೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡರು.
ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮೂಲಕ ಬೆಳಗಾವಿಯಲ್ಲಿ ರಸ್ತೆ ಸಂಪರ್ಕ ಕ್ರಾಂತಿ ಆಗಲಿದೆ.
ಸಚಿವ ನಿತಿನ ಗಡ್ಕರಿ ಅವರು ಮಹಾರಾಷ್ಟ್ರದ ಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಒಂದೇ ಯೋಜನೆಯಡಿ 58 ಕ್ಕೂ ಅಧಿಕ ಮೇಲ್ಸೆತುವೆ ನಿರ್ಮಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಬೃಹತ್ ರಸ್ತೆ ಯೋಜನೆಗಳಿಗೆ ಸಮರ್ಪಕವಾಗಿ ಹಣ ಹೊಂದಿಸುವ ಮೂಲಕ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಒಂದು ರಸ್ತೆ ಮೇಲ್ದರ್ಜೆಗೆ ಏರಿಸಲು ವರ್ಷಗಟ್ಟಲೆ ಬೇಕಾಗಿತ್ತು.ಆದರೆ ಸಚಿವ ನಿತಿನ್ ಗಡ್ಕರಿ ಕಾಲದಲ್ಲಿ ಐದು ಸಾವಿರಕ್ಕೂ ಅಧಿಕ ಕಿ.ಮೀ. ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.