ಮಕ್ಕಳ ಬಿಸಿಯೂಟದಲ್ಲಿ ಹಲ್ಲಿ ಪ್ರತ್ಯಕ್ಷ: ತಪ್ಪಿದ ಅನಾಹುತ
ಚಾಮರಾಜನಗರ: ಇಂದು ಮಧ್ಯಾಹ್ನ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 70 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹನೂರು ತಾಲೂಕಿನ ಬಡಕೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುವಷ್ಟರಲ್ಲಿ ಮಕ್ಕಳು ಊಟ ಮುಗಿದಿತ್ತು. ಎಂದಿನಂತೆ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು, 170 ಮಕ್ಕಳು ಓದುವ ಶಾಲೆಯಲ್ಲಿ ಇಂದು ಕೇವಲ 70 ಮಂದಿ ಊಟವನ್ನು ಮಾಡಿದ್ದಾರೆ. ಊಟಕ್ಕೆ ತಯಾರು ಮಾಡಿದ್ದ ಸಾಂಬಾರಿನಲ್ಲಿ ಹಲ್ಲಿ ಬಿದ್ದಿರುವುದು ತಡವಾಗಿ ಗೊತ್ತಾಗಿದೆ. ಬಿಸಿ ಊಟ ಸೇವಿಸಿದ ಮಕ್ಕಳಲ್ಲಿ ಕೆಲವರಿಗೆ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳನ್ನು ಕೌದಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ರು. ಮಕ್ಕಳಿಗೆ ಚಿಕಿತ್ಸೆ ನೀಡಲಾಗ್ತಿದೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮತ್ತು ಶಾಲೆ ಬಳಿ ಪೋಷಕರು ಜಮಾಯಿಸಿದ್ರು. ಅಡುಗೆ ಸಿಬ್ಬಂದಿ ವಿರುದ್ಧ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ರು. ಗಮನ ಅಡುಗೆ ಮೇಲಿರಬೇಕು ಸರಿಯಾಗಿ ಶುಚಿತ್ವ ಪಾಲಿಸದಿದ್ರೆ ಹೀಗೆ ಆಗೋದು. ಮಕ್ಕಳಿಗೆ ಏನಾದ್ರು ಹೆಚ್ಚು-ಕಡಿಮೆ ಆದ್ರೆ ಯಾರು ಜವಾಬ್ದಾರರು. ನಿಮಗೆ ನೀಡಿರುವ ಕೆಲಸವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುವಂತೆ ಎಚ್ಚರಿಕೆ ನೀಡಿದ್ರು.