ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತೆ; ಕಾಗೋಡು ತಿಮ್ಮಪ್ಪ
ಶಿವಮೊಗ್ಗ; ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ ನಂದಿನಿಯವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಅವರು ಬಿಜೆಪಿ ಸೇರಿದ್ದಾರೆ. ಈ ವಿಷಯ ಕೇಳಿ ಅವರ ತಂದೆ ಕಾಗೋಡು ತಿಮ್ಮಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನನಗೆ ಈಗಷ್ಟೇ ವಿಷಯ ಗೊತ್ತಾಯಿತು. ಅವರು ಹೀಗೆ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ. ಆಕೆ ಬಿಜೆಪಿಗೆ ಸೇರಿದ್ದು ನನ್ನ ಎದೆಗೆ ಇರಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ರಾಜಕಾರಣದಲ್ಲಿ ಸ್ಥಿರತೆ ಹಾಗೂ ನನ್ನ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಿದವನು. ಈಗಲೂ ಅದನ್ನೇ ಮುಂದುವರೆಸಿದ್ದೇನೆ. ಮಗಳಿಗೆ ಟಿಕೆಟ್‌ಗಾಗಿ ಖರ್ಗೆ ಅವರ ಬಳಿ ಹೋಗಿದ್ದೆವು. ಅವಕಾಶ ಇದ್ದರೆ ನೋಡೋಣ ಎಂದು ಖರ್ಗೆಯವರು ಹೇಳಿದ್ದರು. ಆದ್ರೆ ಟಿಕೆಟ್ ಕೈತಪ್ಪಿತು. ಆದರೂ ನನ್ನ ಮಗಳು ಪಕ್ಷದಲ್ಲೇ ಇದ್ದು ರಾಜಕೀಯವಾಗಿ ಬೆಳೆಯಬಹುದಿತ್ತು. ಬಿಜೆಪಿ ಅಭ್ಯರ್ಥಿ ಹಾಲಪ್ಪ ಅವರು ಒತ್ತಡ ಹಾಕಿ ರಾಜನಂದಿನಿಯವರನ್ನು ಬಿಜೆಪಿಗೆ ಸೇರಿಸಿರಬಹುದು. ಆದ್ರೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪರವಾಗಿಯೇ ಇರುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ನನ್ನ ಮಗಳು ರಾಜನಂದಿನಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ್ದಳು. ಟಿಕೆಟ್ ಸಿಗದಿದ್ದಾಗ ನನ್ನ ಬಳಿ ಆಕೆ ಅಸಮಾಧಾನ ತೋಡಿಕೊಂಡಿರಲಿಲ್ಲ. ಆದ್ರೆ ಆಕೆ ಇದ್ದಕ್ಕಿಂತೆ ಯಾರಿಗೂ ಹೇಳದೇ ಬಿಜೆಪಿ ಸೇರಿದ್ದಾಳೆ. ನಾನು ಅವಳನ್ನು ಸಂಪರ್ಕ ಮಾಡುತ್ತೇನೆ. ಮನವೊಲಿಸುವ ಪ್ರಯತ್ನ ಕೂಡಾ ಮಾಡುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಇದೇ ವೇಳೆ ಹೇಳಿದ್ದಾರೆ.