BengaluruPolitics

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಆರ್‌.ಅಶೋಕ್‌ ಹಾಗೂ ಸೋಮಣ್ಣಗೆ ಲಾಭವೋ ನಷ್ಟವೋ..?

ಬೆಂಗಳೂರು; ನಿನ್ನೆ ಬಿಜೆಪಿ 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟ ಮಾಡಿದೆ. ಇದರಲ್ಲಿ ಸಚಿವರಾದ ಆರ್‌.ಅಶೋಕ್‌ ಹಾಗೂ ವಿ.ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲಾಗಿದೆ. ಇಬ್ಬರನ್ನೂ ಕಾಂಗ್ರೆಸ್‌ ನಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳಾದ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗಿಳಿಸಲಾಗಿದೆ. ಕಷ್ಟವೋ, ನಷ್ಟವೋ ಇಬ್ಬರೂ ಹೈಕಮಾಂಡ್‌ ಹೇಳಿದಂತೆ ನಡೆಯಬೇಕಾದ ಪರಿಸ್ಥಿತಿ.

ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸಿದರೆ, ಆ ಇಬ್ಬರೂ ನಾಯಕರು ತಮ್ಮ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಕೊಡುತ್ತಾರೆ. ರಾಜ್ಯಾದ್ಯಂತ ಸುತ್ತಾಡೋದಕ್ಕೂ ಅವರಿಗೂ ಕಷ್ಟವಾಗುತ್ತದೆ. ಅವರನ್ನು ತಮ್ಮ ಕ್ಷೇತ್ರಗಳಲ್ಲಿ ಕಟ್ಟಿಹಾಕಿದರೆ ಚುನಾವಣೆ ಗೆಲ್ಲೋದು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ದು. ಆದ್ರೆ ಇದು ಸಾಧ್ಯವಾ..? ಆರ್‌.ಅಶೋಕ್‌ ಹಾಗೂ ಸೋಮಣ್ಣ ಅವರಿಂದ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕೋದಕ್ಕೆ ಸಾಧ್ಯವಾ ಅನ್ನೋ ಪ್ರಶ್ನೆ ಮೂಡುತ್ತೆ.

ಹಾಗೆ ನೋಡಿದರೆ ಆರ್‌.ಅಶೋಕ್‌ ಅವರು ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಸತತವಾಗಿ ಅವರು ಗೆಲ್ಲುತ್ತಾ ಬಂದಿದ್ದಾರೆ. ಇಷ್ಟು ಪದ್ಮನಾಭನಗರದಲ್ಲಿ ಅವರಿಗೆ ಸುಲಭದ ವಾತಾವರಣವಿತ್ತು. ಆದ್ರೆ ಈ ಬಾರಿ ಆಡಳಿತ ವಿರೋಧಿ ಅಲೆ ಪದ್ಮನಾಭನಗರ ಕ್ಷೇತ್ರದಲ್ಲೂ ಇದೆ. ಹೀಗಾಗಿ ಪದ್ಮನಾಭನಗರ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೆ ಆರ್‌.ಅಶೋಕ್‌ ಅವರು ಪರದಾಡಬೇಕು. ಸೋಲೋದು ಡೌಟಾದರೂ ನೆಕ್‌ ಟು ನೆಕ್‌ ಫೈಟ್‌ ಅಂತೂ ಇರುತ್ತೆ. ಹೀಗಿರುವಾಗ ಅವರಿಗೆ ಇನ್ನೊಂದು ಕ್ಷೇತ್ರ ನೀಡಿದರೆ ಸಾಧ್ಯವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಸ್ವತಃ ಆರ್‌.ಅಶೋಕ್‌ ಬಾಡಿದ ಮುಖವನ್ನು ನೋಡಿರೇನೇ ಗೊತ್ತಾಗುತ್ತೆ ಅವರಿಗೇ ಈ ತಂತ್ರಗಾರಿಕೆ ಇಷ್ಟವಾಗಿಲ್ಲ ಅನ್ನೋದು.

ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‌ ಬಿಗಿ ಹಿಡಿತ ಹೊಂದಿದ್ದಾರೆ. ಜೊತೆಗೆ ಈ ಬಾರಿ ಅವರು ಸಿಎಂ ಆಕಾಂಕ್ಷಿಯಾಗಿರುವುದರಿಂದ ಅವರ ಕ್ಷೇತ್ರದಲ್ಲಿ ಮತದಾರರು ಡಿಕೆಶಿ ಪರ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್‌ ಒಕ್ಕಲಿಗ ನಾಯಕರಾಗಿ ಬಿಂಬಿತರಾಗಿದ್ದಾರೆ. ಗೌಡರ ಕುಟುಂಬ ಬಿಟ್ಟರೆ, ಡಿ.ಕೆ.ಶಿವಕುಮಾರ್‌ ಒಕ್ಕಲಿಗರು ಹೆಚ್ಚು ಮಣೆ ಹಾಕುತ್ತಾರೆ. ಆದ್ರೆ ಆರ್‌.ಅಶೋಕ್‌ ಒಕ್ಕಲಿಗರಾದರೂ ಅವರಿಗೆ ಒಕ್ಕಲಿಗರ ನಾಯಕನೆನ್ನುವ ಇಮೇಜ್‌ ಇನ್ನೂ ಲಭ್ಯವಾಗಿಲ್ಲ. ಬೆಂಗಳೂರಿನಿಂದ ಹೊರಗೆ ಅವರ ಆಟವೂ ನಡೆಯೋದಿಲ್ಲ.

ಇನ್ನು ಕನಕಪುರ ಕ್ಷೇತ್ರದಲ್ಲಿ ಬಿಜೆಪಿಗೆ ಇನ್ನೂ ನೆಲೆಯೇ ಇಲ್ಲ. ಕ್ಷೇತ್ರದಲ್ಲಿ ಒಕ್ಕಲಿಗರೇ ಹೆಚ್ಚಿದ್ದರೂ, ಎಷ್ಟೋ ಜನಕ್ಕೆ ಆರ್‌.ಅಶೋಕ್‌ ಅವರ ಪರಿಚಯವೇ ಇಲ್ಲ. ಹೀಗಿರುವಾಗ ಅವರು ಕೊನೇ ಕ್ಷಣದಲ್ಲಿ ಕನಕಪುರದಲ್ಲಿ ಹೋಗಿ ಚುನಾವಣೆ ಗೆಲ್ಲೋದು ಕಷ್ಟ. ಡಿ.ಕೆ.ಶಿವಕುಮಾರ್‌ಗೆ ಫೈಟ್‌ ಕೊಡೋದಕ್ಕೂ ಕೂಡಾ ಕಷ್ಟವಾಗುತ್ತೆ. ಇನ್ನೂ ಎರಡು ಕ್ಷೇತ್ರಗಳಲ್ಲಿ ಗಮನ ಹರಿಸಬೇಕಿರೋದ್ರಿಂದ ಎರಡೂ ಕ್ಷೇತ್ರ ಕಳೆದುಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಲ್ಲಿ ಈಗಾಗಲೇ ಪದ್ಮನಾಭನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಆದ್ರೆ ಅದನ್ನು ಬದಲಿಸಿ ಡಿ.ಕೆ.ಸುರೇಶ್‌ ಅವರನ್ನೇ ಕಣಕ್ಕಿಳಿಸೋಕೆ ಕಾಂಗ್ರೆಸ್‌ ತಂತ್ರಗಾರಿಕೆ ನಡೆಸ್ತಿದೆ. ಹಾಗೇನಾದರೂ ಆದರೆ ಎರಡು ಕ್ಷೇತ್ರಗಳಲ್ಲಿ ಆರ್‌.ಅಶೋಕ್‌, ಡಿಕೆ ಬ್ರದರ್ಸ್‌ ಇಬ್ಬರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತೆ. ಇದೆಲ್ಲವನ್ನೂ ನೋಡಿದರೆ ಆರ್‌.ಅಶೋಕ್‌ಗೆ ಎರಡು ಕ್ಷೇತ್ರ ಕೊಟ್ಟಿರುವುದರಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ ಸುತ್ತಾಡಬೇಕಿದ್ದ ಆರ್‌.ಅಶೋಕ್‌ ಈಗ ಎರಡು ಕ್ಷೇತ್ರಕ್ಕೆ ಸೀಮಿತವಾಗಬೇಕಾದ ಅನಿವಾರ್ಯತೆ ಎದುರಾಗುತ್ತೆ ಎಂದು ಹೇಳಲಾಗುತ್ತಿದೆ.

ಇನ್ನು ಸಚಿವ ವಿ.ಸೋಮಣ್ಣ ಅವರ ಪರಿಸ್ಥಿತಿಯೂ ಇದೇ ಆಗಿದೆ. ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದ್ರೆ ಅವರಿಗೆ ಈಗ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳನ್ನು ನೀಡಿದ್ದಾರೆ. ವರುಣಾ ಸಿದ್ದರಾಮಯ್ಯ ಅವರ ತವರು ಕ್ಷೇತ್ರ, ಚಾಮರಾಜನಗರ ಕ್ಷೇತ್ರ ವಿ.ಸೋಮಣ್ಣ ಅವರಿಗೆ ಹೊಸದು. ಅವರು ಈ ಹಿಂದೆ ಹನೂರು ಕ್ಷೇತ್ರದಿಂದ ಟಿಕೆಟ್‌ ಕೇಳುತ್ತಿದ್ದರು. ಆದ್ರೆ ಚಾಮರಾಜನಗರ ಸೋಮಣ್ಣ ಅವರಿಗೆ ಹೊಸದೇ. ಎರಡೂ ಕಡೆ ಲಿಂಗಾಯತ ಮತಗಳಿರಬಹುದು. ಆದ್ರೆ ಕೊನೇ ಒಂದು ತಿಂಗಳಲ್ಲಿ ಸೋಮಣ್ಣ ಅವರು ಸಂಘಟನೆ ಮಾಡಿ, ಗೆಲ್ಲೋದಕ್ಕೆ ಕಷ್ಟವಾಗುತ್ತೆ.

ವರುಣಾದಲ್ಲಿ ಕೂಡಾ ಲಿಂಗಾಯತ ಮತಗಳು ಹೆಚ್ಚಿವೆ. ಆದ್ರೆ ಇದು ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ಜೊತೆಗೆ ಇದು ನನ್ನ ಕೊನೇ ಚುನಾವಣೆ ಎಂದು ಹೇಳುತ್ತಿರುವುದರಿಂದ ಮತದಾರರಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ವಿ.ಸೋಮಣ್ಣ ಅವರು ಅಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಇಲ್ಲಿ ಕಳೆದ ಚುನಾವಣೆ ಸಮಯದಲ್ಲಿ ವಿಜಯೇಂದ್ರ ಬಂದು ಪಕ್ಷ ಸಂಘಟನೆ ಮಾಡಿದ್ದರು. ಹೀಗಾಗಿ, ಬಿಜೆಪಿಗೆ ಕೊಂಚ ಒಲವಿದೆ. ಆದ್ರೆ ವಿ.ಸೋಮಣ್ಣ ಅವರು ಸಿದ್ದರಾಮಯ್ಯ ವಿರುದ್ಧ ಗೆಲ್ಲುವಷ್ಟು ತಾಕತ್ತು ಇಲ್ಲ ಎಂದೇ ಹೇಳಲಾಗುತ್ತಿದೆ. ಇನ್ನು ಸೋಮಣ್ಣ ಅವರಿಗೆ ಚಾಮರಾಜನಗರ ಕೂಡಾ ಸುಲಭವಾಗೋದಿಲ್ಲ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸಂಘಟನೆ ಮಾಡಿ ಗೆಲ್ಲೋದು ಕಷ್ಟದ ಮಾತು ಎಂದೇ ಹೇಳಲಾಗುತ್ತಿದೆ.

ಇದೆಲ್ಲವನ್ನೂ ನೋಡುತ್ತಿದ್ದರೆ ಬಿಜೆಪಿ ವರಿಷ್ಠರು ಕಾಂಗ್ರೆಸ್‌ ನಾಯಕರನ್ನು ಕಟ್ಟಿ ಹಾಕಲು ಈ ನಿರ್ಧಾರ ಮಾಡಿಲ್ಲ, ಬದಲಾಗಿ, ಸೋಮಣ್ಣ ಹಾಗೂ ಆರ್‌.ಅಶೋಕ್‌ರನ್ನು ಕಟ್ಟಿಹಾಕೋದಕ್ಕೆ ಈ ಪ್ಲ್ಯಾನ್‌ ಮಾಡಿರಬಹುದು ಎಂಬ ಸಂಶಯ ಕೂಡಾ ಕಾಡುತ್ತಿದೆ.

 

Share Post