ಅಡಕೆ ಮರಗಳ ಮಾರಣಹೋಮ:ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ
ಕಾರವಾರ: ಅರಣ್ಯ ಪ್ರದೇಶ ಒತ್ತುವರಿ ಮಾಡಿ ಬೆಳೆ ಬೆಳೆದಿದ್ದಾರೆಂದು ಆರೋಪಿಸಿ ರೈತರು ಬೆಳೆದಿದ್ದ ಅಡಕೆ ಮರಗಳನ್ನು ನಾಶಪಡಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರೆಯ ಶವಗುಳಿ ಗ್ರಾಮದಲ್ಲಿ ನಡೆದಿದೆ. ಬೆಳ್ಳಾ ತಮ್ಮಣ್ಣ ಕುಣಬಿ ಮತ್ತು ಸಾತಾ ಒಳ್ಳು ಕುಣಬಿ ಎಂಬ ರೈತರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಕೆ ಮತ್ತು ಬಾಳೆ ಬೆಳೆಯನ್ನು ಕಡಿದು ನಾಶ ಮಾಡಿದ್ದಾರೆ.
ಇನ್ನೊಂದು ವರ್ಷ ಕಳೆದಿದ್ದರೆ ಬಂಗಾರದಂತಹ ಬೆಳೆ ಬರುತ್ತಿತ್ತು. ನಮ್ಮ ಅನ್ನವನ್ನು ಅರಣ್ಯಾಧಿಕಾರಿಗಳು ಕಿತ್ತು ಕೊಂಡಿದ್ದಾರೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಐದು ವರ್ಷಗಳಿಂದ ಮಕ್ಕಳನ್ನು ಸಾಕಿದಂತೆ ಅಡಕೆ ಮರಗಳನ್ನು ಪೋಷಣೆ ಮಾಡಲಾಗಿತ್ತು. ಆದರೆ ಇಂದು ಎಂಟು ಅರಣ್ಯ ಅಧಿಕಾರಿಗಳ ತಂಡ ಧಿಡೀರನೆ ತೋಟಕ್ಕೆ ಕಷ್ಟ ಪಟ್ಟು ಬೆಳೆದ ಅಡಕೆ ಮರಗಳನ್ನ ಕಡೆದು ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಬೆಳೆಗೆ ಈಗ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ.
ಇದು ನಮ್ಮ ಬೆವರಿನ ಫಲ ದಯವಿಟ್ಟು ನಾಶ ಮಾಡಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಬಿಡದೆ ಇಷ್ಟಬಂದಂತೆ ಕಡಿದು ಬಿಸಾಕಿದ್ದಾರೆ. ಇದಕ್ಕೂ ಮುನ್ನ ಹಲವಾರು ಹಣಕ್ಕೆ ಬೇಡಿಕೆ ಇಟ್ಟಿದ್ರು ನಾವು ಕೊಡದ ಕಾರಣ ಹೀಗೆ ಮಾಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ಬೆಳೆ ಇಡುವ ಮುನ್ನ ಬಂದು ಯಾಕೆ ನಮಗೆ ಮಾಹಿತಿ ನೀಡಲಿಲ್ಲ. ಐದು ವರ್ಷದಿಂದ ಬಿಟ್ಟು ಈಗ ಫಲ ಕೊಡುವ ಸಮಯದಲ್ಲಿ ಹೀಗೆ ಹಾಳು ಮಾಡಿದ್ರೆ ನಾವು ಯಾರಿಗೆ ಹೇಳೋದು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅಂಕೋಲ ಆರ್ಎಫ್ಓವಿಪಿ ನಾಯಕ್ ಹೇಳೊ ರೀತಿ ನೀಡಿದ್ರೆ ಇದು ರೈತರು ಹೊಸ ಅತಿಕ್ರಮಣ ಮಾಡಿ ಬೆಳೆ ಬೆಳೆದಿದ್ದಾರೆ ಹಾಗಾಗಿ ಅದನ್ನು ತೆರವುಗೊಳಿಸಲಾಗಿದೆ ಎಂದಿದ್ದಾರೆ. ಹಳೆಯ ಅತಿಕ್ರಮಣ ಇದ್ದರೆ ಅರಣ್ಯ ಇಲಾಖೆಯಿಂದಲೇ ಮಾಹಿತಿ ಸಂಗ್ರಹಿಸಿ ಫಲಾನುಭವಿಗಳಿಗೆ ಪಟ್ಟ ಸಿಗುವಂತೆ ಮಾಡಿದ್ದೇವೆ. ಇಲ್ಲಿನ ಹಟ್ಟಿಕೇರೆ ಮತ್ತು ಶವಗುಳಿ ಗ್ರಾಮದ ರೈತರು ಹೊಸದಾಗಿ ಭೂಮಿಯನ್ನು ಅತಿಕ್ರಮಣ ಮಾಡಿ ಕೃಷಿ ಮಾಡಿದ್ದರು ಅದನ್ನ ತಡೆದಿದ್ದೇವೆ ಎಂದು ತಿಳಿಸಿದರು.
ಸಾವಿರಾರು ಎಕರೆ ನುಂಗಿ ನೀರ್ಕುಡಿದು ಫ್ಯಾಕ್ಟರಿ, ಎಸ್ಟೇಟ್ ಮಾಡುವವರನ್ನು ತಡೆಯುವುದನ್ನು ಬಿಟ್ಟು ಹೀಗೆ ಹೊಟ್ಟೆಪಾಡಿಗಾಗಿ ಭೂಮಿ ತಾಯಿಯನ್ನು ನಂಬಿಕೊಂಡು ಬದುಕಿತ್ತಿರುವ ಬಡ ರೈತರ ಮೇಲೆ ಅಧಿಕಾರಗಳ ದರ್ಪಕ್ಕೆ ಧಿಕ್ಕಾರವಿರಲಿ.