CrimeDistricts

ರೈಲಿನಲ್ಲಿ 2 ಕೋಟಿ ಸಾಗಿಸುತ್ತಿದ್ದವನ ಬಳಿ ಟಿಕೆಟ್ಟೇ ಇರಲಿಲ್ಲ..!

ಕಾರವಾರ; ಸಾಮಾನ್ಯವಾಗಿ ಹಣ ಇಲ್ಲದೇ ಇದ್ದವರು ರೈಲಿನಲ್ಲಿ ಟಿಕೆಟ್‌ ಇಲ್ಲದೆ ಕಳ್ಳತನವಾಗಿ ಪ್ರಯಾಣ ಮಾಡುತ್ತಾರೆ. ಆದ್ರೆ, ಮುಂಬೈನಿಂದ ಬರುತ್ತಿದ್ದ ವ್ಯಕ್ತಿಯ ಬಳಿಯ ರೈಲು ಟಿಕೆಟ್‌ ಇರಲಿಲ್ಲ, ಹಣ ಅಂತೂ ಸಾಕಷ್ಟಿತ್ತು. ಅದು ಅಷ್ಟೋ ಇಷ್ಟೂ ಅಲ್ಲ, ಬರೋಬ್ಬರಿ 2 ಕೋಟಿ ರೂಪಾಯಿ. ಅದಕ್ಕೆ ದಾಖಲೆ ಇಲ್ಲದ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

 

ಹೌದು, ವ್ಯಕ್ತಿಯೊಬ್ಬ  ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ 2 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ. ದಾಖಲೆ ರಹಿತ ಈ ಹಣವನ್ನು   ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಬಂಧಿತ ಆರೋಪಿ. ಮಂಗಳೂರು ಎಕ್ಸ್‍ಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತಿದ್ದ ಮನೋಹರ್ ಸಿಂಗ್‍ನನ್ನು ಕಾರವಾರದ ಬಳಿ ರೈಲ್ವೆ ಪೊಲೀಸರು ದಂಡ ವಿಧಿಸಿದ್ದರು. ಈ ವೇಳೆ ಅನುಮಾನಗೊಂಡ ರೈಲ್ವೆ ಪೊಲೀಸರು ಈತನ ಬಳಿ ಇದ್ದ ಬ್ಯಾಗ್ ತಪಾಸಣೆಗೆ ಮಾಡಿದಾಗ,ಬ್ಯಾಗ್‌ನಲ್ಲಿ 100 ಬಂಡಲ್‍ನ 2 ಕೋಟಿ ಹಣ ಪತ್ತೆಯಾಗಿದೆ.

ಮನೋಹರ್ ಸಿಂಗ್ ಮುಂಬೈನ ಭರತ್ ಬಾಯ್ ಅಲಿಯಾಸ್ ಪಿಂಟೊ ಎಂಬುವರ ಬಳಿ 15 ಸಾವಿರಕ್ಕೆ ಕೆಲಸ ಮಾಡುತಿದ್ದ. ಮನೋಹರ್ ಸಿಂಗ್ ತನ್ನ ಮಾಲೀಕನಿಂದ ಬ್ಯಾಗ್ ಪಡೆದು ಮಂಗಳೂರಿನಲ್ಲಿ ರಾಜು ಎಂಬವರಿಗೆ ತಲುಪಿಸಲು ಮುಂಬೈನಿಂದ ಮಂಗಳೂರಿಗೆ ಹೊರಟಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Share Post