ಅವ್ಯವಸ್ಥೆಯ ಆಗರವಾದ ಕೋವಿಡ್ ಕೇರ್ ಸೆಂಟರ್: ಶಾಸಕ ಗರಂ
ಮಂಡ್ಯ: ಕೋವಿಡ್ ಕೇರ್ ಸೆಂಟರ್ನಲ್ಲಿ ಮೂಲಭೂತ ಸೌಕರ್ಯ ಕೊರತೆ ಉಂಟಾಗಿದ್ದಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಹಶೀಲ್ದಾರ್ಗೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಕೋವಿಡ್ ಕೇರ್ ಸೆಂಟರ್ಗೆ ಶಾಸಕರು ಭೇಟಿ ನೀಡಿದಾಗ ಸೌಲಭ್ಯ ಕಲ್ಪಿಸದ ಬಗ್ಗೆ ಸೋಂಕಿತರು ದೂರು ನೀಡಿದ್ದಾರೆ. ಶೌಚಾಲಯದ ಅವ್ಯವಸ್ಥೆ, ಬಿಸಿ ನೀರು ಕೊಡ್ತಿಲ್ಲ, ಊಟದ ಗುಣಮಟ್ಟ ಸರಿ ಇಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಈ ವೇಳೆ ತಹಶೀಲ್ದಾರ್ ನೀಡಿದ ಸಮಜಾಯಿಷಿಗೆ ಸಿಡಿದೆದ್ದ ರವೀಂದ್ರ ಶ್ರೀಕಂಠಯ್ಯ ನೀವೇನು ಸ್ವಂತ ಕೊಡಿಸ್ತಿದ್ದಿರಾ.?, ಸರ್ಕಾರ ಕೊಡ್ತಿಲ್ವ.? ನಿಮ್ಮ ಮನೆಯವರಿಗೆ ಹೀಗೆ ಸಮಸ್ಯೆಗಳಾದ್ರೆ ಏನ್ಮಾಡ್ತಿರ..? ಎಂದು ತರಾಟೆಗೆ ತೆಗೆದುಕೊಂಡ್ರು. ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅಸಡ್ಡೆ ಕಾರ್ಯಪ್ರವೃತ್ತಿ ಬಗ್ಗೆ ಸಚಿವ ನಾರಾಯಣಗೌಡರಿಗೆ ದೂರನ್ನು ನೀಡಿದ್ರು.
ತರಾಟೆ ಪಂಚಾಯಿತಿ ಮುಗಿದ ಬಳಿಕ ಸೋಂಕಿತರಿಗೆ ಧೈರ್ಯ ಹೇಳಿ, ಎಲ್ಲರೂ ಕ್ವಾರಂಟೈನ್ ಮುಗಿಸಿ ನೆಗೆಟಿವ್ ವರದಿ ಬಳಿಕ ಮನೆಗೆ ಹೋಗಿ ಎಂದು ಸೂಚನೆ ನೀಡಿದ್ರು. ಆಗಿಂದಾಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಸ್ಪಂದಿಸಿ ಚಿಕಿತ್ಸೆ ಪಡೆಯಿರಿ. ಏನಾದ್ರೂ ಸಮಸ್ಯೆಗಳಾದರೆ ಕರೆ ಮಾಡುವಂತೆ ತಿಳಿಸಿ ಸೋಂಕಿತರಿಗೆ ಧೈರ್ಯ ತುಂಬಿದ್ರು.