Districts

ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಮೊಟಕು; ಸಿದ್ದರಾಮಯ್ಯ

ರಾಮನಗರ; ಸರ್ಕಾರದ ನೋಟಿಸ್‌ಗೆ ಹೆದರಿ ನಾವು ಪಾದಯಾತ್ರೆ ನಿಲ್ಲಿಸುತ್ತಿಲ್ಲ. ದೇಶಾದ್ಯಂತ ಕೊರೊನಾ ಹೆಚ್ಚಾಗುತ್ತಿರುವುದರಿಂದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸದ್ಯಕ್ಕೆ ಪಾದಯಾತ್ರೆಯನ್ನು ಮೊಟಕುಗೊಳಿಸುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕೊರೊನಾ ಜಾಸ್ತಿಯಾಗ್ತಿದೆ ಅಂದ್ರೆ ಅದಕ್ಕೆ ಬಿಜೆಪಿಯೇ ಕಾರಣ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪರಿಷತ್‌ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ನಡೆಸಲಾಯಿತು. ಅದಕ್ಕೆ ಸಿಎಂ ನಾಲ್ಕೈದು ಸಾವಿರ ಜನರನ್ನು ಸೇರಿಸಿದ್ದರು.

ಇನ್ನು ರೇಣುಕಾಚಾರ್ಯ ಅವರು ಅದ್ದೂರಿ ಜಾತ್ರೆ ನಡೆಸಿ, ಅದಕ್ಕಾಗಿಯೂ ಸಾವಿರಾರು ಜನರನ್ನು ಸೇರಿಸಲಾಗಿತ್ತು. ಗೃಹ ಸಚಿವರ ತವರು ಕ್ಷೇತ್ರದಲ್ಲೂ ಅದ್ದೂರಿ ಜಾತ್ರೆಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ಯಾರ ಮೇಲೂ ಕ್ರಮ ಕೈಗೊಳ್ಳಲಿಲ್ಲ. ಆದರೆ ನಮ್ಮ ಮೇಲೆ ಎಫ್‌ಐಆರ್‌ ಹಾಕಿದ್ದಾರೆ.

ನಾವು ಯಾವುದೇ ನೋಟಿಸ್‌ ಗೆ ಹೆದರಿಲ್ಲ. ಜನರ ಹಿತ ಮುಖ್ಯ. ಹೀಗಾಗಿ, ಪಾದಯಾತ್ರೆ ಇಲ್ಲಿಗೆ ಮೊಟಕುಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನು ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರ ನಮಗೆ ಪಾದಯಾತ್ರೆ ನಿಲ್ಲಿಸಿ ಎಂದು ನೋಟಿಸ್‌ ಕೊಟ್ಟಿಲ್ಲ. ರಸ್ತೆಯ ಸೈಡ್‌ನಲ್ಲಿ ಪಾದಯಾತ್ರೆ ಮಾಡಿ, ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಿ ಎಂದಷ್ಟೇ ಹೇಳಿದ್ದರು. ಆದರೆ, ಕೋರ್ಟ್‌ ಆದೇಶಕ್ಕೆ ಗೌರವ ಕೊಟ್ಟು ಹಾಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾದಯಾತ್ರೆ ನಿಲ್ಲಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಾವು ಪಾದಯಾತ್ರೆ ಶುರು ಮಾಡಿದಾಗ ಕೊರೊನಾದಿಂದ ಯಾರೂ ಐಸಿಯು ಸೇರಿರಲಿಲ್ಲ. ಇವತ್ತೂ ಕೂಡಾ ಅದೇ ಪರಿಸ್ಥಿತಿ ಇದೆ. ನಾವು ಪಾದಯಾತ್ರೆಯನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೇ ಪಾದಯಾತ್ರೆ ನಡೆಸಿದ್ದೇನೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Share Post