ನಾನು ವಿಷಕಂಠ, ಎಲ್ಲವನ್ನು ನುಂಗಿಕೊಂಡಿದ್ದೆ:ಇಬ್ರಾಹಿಂ ಭಾವುಕ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ತೊರೆದಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ತಮ್ಮ ಈಗಿನ ರಾಜಕೀಯ ಸ್ಥಿತಿ ನೆನೆದು ಭಾವುಕರಾಗಿ ಕಣ್ಣೀರಾಕಿದರು. ನನ್ನನ್ನ ನೀವು ಬೆಳೆಸಿದ್ದೀರಾ, ಇನ್ಮೇಲು ನೀವೆ ನನ್ನ ಕೈ ಹಿಡಿಯಬೇಕು ಮಾಧ್ಯಮದವರಲ್ಲಿ ಮನವಿ ಮಾಡಿ ಸಿ.ಎಂ.ಇಬ್ರಾಹಿಂ ಕಣ್ಣೀರಾಕಿದರು.
ಪಕ್ಷದಿಂದ ಹೊರ ಬಂದಿದ್ದೇನೆ. ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಬಹಳ ಕೆಟ್ಟದ್ದು, ಅವರಿಗೆ ನನ್ನ ಶಾಪ ತಟ್ಟದೆ ಬಿಡದು. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ ಎಂದು ಕೋಪೋದ್ರಿಕ್ತರಾಗಿ ನುಡಿದರು. ನನ್ನ ಎಂಎಲ್‌ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ನಾಳೆನೇ ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ ಎಂದು ಇಬ್ರಾಹಿಂ ಅವರು ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಳ ದೊಡ್ಡವರು ನಮ್ಮಂತವರನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆಯೇ ಎಲ್ಲವನ್ನು ಸರಿ ಮಾಡ್ತಿನಿ ಅಂದ್ರು. ಆದ್ರೆ ಏನು ಆಗಿಲ್ಲ ಎಂದು ಇಬ್ರಾಹಿಂ ತಮ್ಮ ಗೋಳು ತೋಡಿಕೊಂಡರು. ನಮ್ಮ ಜೊತೆ ಯಾರ ಬರುತ್ತಾರೊ ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಇಬ್ರಾಹಿಂ ಬಹಿರಂಗ ಹೇಳಿಕೆ ನೀಡಿದ್ರು.