Districts

ನಲವತ್ತು ಪರ್ಸೆಂಟ್‌ ಕಮೀಷನ್‌ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ

ಉಡುಪಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ನಲವತ್ತು ಪರ್ಸೆಂಟ್‌ ಕಮೀಷನ್‌ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ‌ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮಗಳಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಸಂತೋಷ್ ಪಾಟೀಲ್‌, ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಶಾಂಭವಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಅವರ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿದಾಗ ಶಾಂಭವಿ ಲಾಡ್ಜ್‌ನಲ್ಲಿ ಸಂತೋಷ್ ಪಾಟೀಲ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನನ್ನ ಸಾವಿಗೆ ನೇರ ಕಾರಣ ಕೆ.ಎಸ್‌.ಈಶ್ವರಪ್ಪ. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ, ಮಗುವಿನ ಸರ್ಕಾರ ಅಂದರೆ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್‌.ಯಡಿಯೂರಪ್ಪನವರು ಸಹಾಯ ಹಸ್ತ ನೀಡಬೇಕು. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಸಂತೋಷ್‌ ಮಾಧ್ಯಮಕ್ಕೆ ಸಂದೇಶ ಕಳುಹಿಸಿದ್ದಾರೆ.
ನನ್ನ ಗೆಳೆಯರನ್ನು ಪ್ರವಾಸ ಹೋಗೋಣ ಅಂತ ನ್ನ ಜೊತೆಗೆ ಕರೆದುಕೊಂಡು ಬಂದಿದ್ದೇವೆ ಅಷ್ಟೇ. ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೇ ಸಂಬಂಧ ಇರಲ್ಲ ಅಂತ ಸಂತೋಷ್‌ ಮೆಸೇಜ್‌ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಬೆಳಗಾವಿ ತಾಲ್ಲೂಕಿನ ಬಡಸ ಗ್ರಾಮದ ನಿವಾಸಿ. ಬಡಸ ಗ್ರಾಮ ಬಿಟ್ಟು ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗು ಇದೆ.

Share Post