ಮಂಗಳೂರಿಗೆ ಬಂದಿದ್ದ ವ್ಯಕ್ತಿಗೂ ಮಂಕಿ ಪಾಕ್ಸ್ ದೃಢ; ಹೆಚ್ಚಾಯ್ತು ಆತಂಕ
ಮಂಗಳೂರು; ಕೇರಳದಲ್ಲಿ ಇಬ್ಬರಿಗೆ ಮಂಕಿ ಪಾಕ್ಸ್ ಸೋಂಕು ಇರುವುದು ದೃಢವಾಗಿತ್ತು. ಇದರಲ್ಲಿ ಒಬ್ಬ ವ್ಯಕ್ತಿ ಕರ್ನಾಟಕದ ಮೂಲಕ ಕೇರಳಕ್ಕೆ ಹೋಗಿರುವುದಾಗಿ ತಿಳಿದುಬಂದಿದೆ. ದುಬೈನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಪಾಕ್ಸ್ ಇದೆ ಎಂದು ವರದಿ ಹೇಳಿದೆ.
ಜುಲೈ 13 ರಂದು 31 ವರ್ಷದ ವ್ಯಕ್ತಿಯೊಬ್ಬರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ಅನಂತರ ಆ ವ್ಯಕ್ತಿ ಕೇರಳದ ಕಣ್ಣೂರಿಗೆ ತೆರಳಿದ್ದರು. ಅವರಿಗೆ ಮಂಕಿ ಪಾಕ್ಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆಗೆ ಒಳಗಾಗಿದ್ದರು. ಅವರ ಮೆಡಿಕಲ್ ರಿಪೋರ್ಟ್‌ನಲ್ಲಿ ಮಂಕಿ ಪಾಕ್ಸ್ ಬಂದಿರುವುದು ದೃಢಪಟ್ಟಿದೆ. ಹೀಗಾಗಿ ಈ ಪ್ರಯಾಣಿಕನ ಸಂಪರ್ಕದಲ್ಲಿದ್ದ 35 ಮಂದಿಯನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ.
ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರಿನ ಒಬ್ಬ ಪ್ರಯಾಣಿಕ ಇದ್ದ. ಆ ವ್ಯಕ್ತಿಗೇ ಈಗ ಮಂಕಿ ಪಾಕ್ಸ್ ಬಂದಿರೋದು. ಯುವಕನ ರಕ್ತದ ಮಾದರಿಯನ್ನು ಪುಣೆ ವೈರಾಲಜಿ ಕೇಂದ್ರಕ್ಕೆ ವೈದ್ಯರು ಕಳುಹಿಸಿದ್ದು, ಅಲ್ಲಿ ಪಾಸಿಟಿವ್ ಬಂದಿರುವುದು ತಿಳಿದುಬಂದಿದೆ. ಹೀಗಾಗಿ, ದೇ ವಿಮಾನದಲ್ಲಿ ಬಂದವರಿಗೆ ರೋಗ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.