Crime

ಅಬ್ಬಿಗೆರೆಯಲ್ಲಿ ಸೌಂದರ್ಯ ಅಂತ್ಯಕ್ರಿಯೆ; ಶೀಘ್ರದಲ್ಲೇ ಮೃತದೇಹ ಅಬ್ಬಿಗೆರೆಗೆ ರವಾನೆ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಮೃತದೇಹವನ್ನು ಅವರ ಪತಿ ಡಾ.ನೀರಜ್‌ ಅವರ ನಿವಾಸಕ್ಕೆ ತರಲಾಗುತ್ತದೆ. ಅದಕ್ಕಾಗಿ ಸಿದ್ಧತೆ ನಡೆಸಲಾಗುತ್ತದೆ. ಬೌರಿಂಗ್‌ ಆಸ್ಪತ್ರೆಯಿಂದ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಅಬ್ಬಿಗೆರೆಯ ನೀರಜ್‌ ನಿವಾಸಕ್ಕೆ ಮೃತದೇಹ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಬ್ಬಿಗೆರೆಯ ನೀರಜ್‌ ನಿವಾಸದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇನ್ನು ಅಬ್ಬಿಗೆರೆಯ ನೀರಜ್‌ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಭೇಟಿ ನೀಡಿದ್ದಾರೆ. ನೀರಜ್‌ ಅವರ ಪೋಷಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.  ಇನ್ನೊಂದೆಡೆ ಅಬ್ಬಿಗೆರೆಯಲ್ಲಿ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಲಾಗುತ್ತಿದೆ. ಅಬ್ಬಿಗೆರೆಯಲ್ಲಿರುವ ಡಾ.ನೀರಜ್‌ ಅವರ ಕುಟುಂಬದ ಫಾರಂ ಹೌಸ್‌ನಲ್ಲಿ ಅಂತಿಮ ವಿಧಿ ವಿಧಾನಕ್ಕೆ ಸಿದ್ಧತೆ ನಡೆಯುತ್ತಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿದ್ದು, ಹೊನ್ನಗವಿ ಮಠದ ರುದ್ರಮುನಿ ಶ್ರೀಗಳ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸೌಂದರ್ಯ ಅವರು ಎಂಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ರೆಡಿಯಾಲಜಿಸ್ಟ್‌ ಆಗಿದ್ದರು. ಡಾ.ಸೂರಜ್‌ ಕೂಡಾ ಅದೇ ಆಸ್ಪತ್ರೆಯಲ್ಲಿ ಕಳೆದ ಏಳು ವರ್ಷಗಳಿಂದ ರೇಡಿಯಾಲಜಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ಇವರಿಗೆ ಒಂದು ಮಗು ಕೂಡಾ ಇದೆ.  ಸೌಂದರ್ಯ ಪತಿ ನೀರಜ್‌ ಅಬ್ಬಿಗೆರೆ ಗ್ರಾಮದವರಾಗಿದ್ದಾರೆ. ಶಿವಕುಮಾರ್‌ ಹಾಗೂ ಪದ್ಮಾ ದಂಪತಿಯ ಪುತ್ರರಾಗಿರುವ ನೀರಜ್‌, ಪತ್ನಿಯ ಜೊತೆ ಕನ್ನಿಂಗ್‌ಹ್ಯಾಂ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು.

 

Share Post