National

ಭಾರತ-ಪಾಕ್‌ ಗಡಿಯಲ್ಲಿ ಎನ್‌ಕೌಂಟರ್‌, 47ಕೆಜಿ. ಹೆರಾಯಿನ್‌ ವಶಕ್ಕೆ

ಪಂಜಾಬ್ : ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆದ ಎನ್‌ಕೌಂಟರ್ನಲ್ಲಿ    47 ಕೆಜಿ ಹೆರಾಯಿನ್ ಅನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ. ಹೆರಾಯಿನ್ ಜೊತೆಗೆ ಶಸ್ತ್ರಾಸ್ತ್ರಗಳು,  ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಗಡಿಯಲ್ಲಿ ನಡೆದಿದೆ. ಭದ್ರತಾ ಪಡೆ ಮತ್ತು ಪಾಕಿಸ್ತಾನಿ ಕಳ್ಳಸಾಗಣೆದಾರರ ನಡುವೆ ಕರ್ತಾರ್‌ಪುರ ಕಾರಿಡಾರ್ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಪಾಕಿಸ್ತಾನಿ ಸ್ಮಗ್ಲರ್‌ಗಳ ಚಲನವಲನವನ್ನು ಬಿಎಸ್‌ಎಫ್ ಯೋಧರು ನಿಗಾ ಇಟ್ಟಿದ್ರು. ಈ ವೇಳೆ ಒಮ್ಮೆಲೆ ಕಳ್ಳಸಾಗಣೆದಾರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಜವಾನ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸದ್ಯ ಯೋಧನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ. ಪಾಕ್ ಕಳ್ಳಸಾಗಣೆದಾರರಿಂದ ಭಾರೀ ಪ್ರಮಾಣದ ಹೆರಾಯಿನ್ ಕಳ್ಳಸಾಗಣೆ ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 47 ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಯಾಕೆಟ್‌ಗಳಲ್ಲಿ ಅಫೀಮು ಇದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ನಂಬಿದ್ದಾರೆ. ಎರಡು ಮ್ಯಾಗಜೀನ್‌ಗಳ ಜೊತೆಗೆ ಚೀನಾದ ರಿವಾಲ್ವರ್, ನಾಲ್ಕು AK-47  ವಶಪಡಿಸಿಕೊಂಡಿದ್ದಾರೆ.

Share Post