ಇದೇ ಮೊದಲ ಬಾರಿಗೆ ಕೆರೆ ಸೀಜ್ ಮಾಡಿದ ಅಧಿಕಾರಿಗಳು!
ಬೆಂಗಳೂರು; ಬೆಂಗಳೂರು ನಗರದಲ್ಲಿ ನೂರಾರು ಕೆರೆಗಳಿದ್ದವು. ಅವೆಲ್ಲಾ ಭೂಗಳ್ಳರ ಪಾಲಾಗಿವೆ. ಆದ್ರೆ ಇದೇ ಮೊದಲ ಎಂಬಂತೆ ಬೆಂಗಳೂರಲ್ಲಿ ಅಧಿಕಾರಿಗಳು ಕೆರೆಯೊಂದರನ್ನು ಸೀಜ್ ಮಾಡಿ, ಭೂಗಳ್ಳರಿಗೆ ಪಾಠ ಕಲಿಸಿದ್ದಾರೆ.
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆನ್ನಾಗರ ಕೆರೆಯನ್ನು ಖಾಸಗಿ ಕಂಪನಿ ಹಾಗೂ ಬಿಲ್ಡರ್‌ಗಳ ಒತ್ತುವರಿ ಮಾಡಿದ ಆರೋಪ ಕೇಳಿಬಂದಿತ್ತು. ಮಾಹಿತಿ ಗೊತ್ತಾಗುತ್ತಿದ್ದಂತೆ ತಹಸೀಲ್ದಾರ್ ಶಿವಪ್ಪ ಲಮಾಣಿ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಹೆನ್ನಾಗರ ಕೆರೆಪ್ರದೇಶ ಹಾಗೂ ಮಾಸ್ತೇನಹಳ್ಳಿ ಸರ್ಕಾರಿ ಜಾಗವನ್ನು ಸೀಜ್ ಮಾಡಿಸಿದ್ದಾರೆ. ಈ ಮೂಲಕ ದಿಟ್ಟ ಅಧಿಕಾರಿ ಎಂಬ ಹೊಗಳಿಕೆಗೆ ಪಾತ್ರರಾಗಿದ್ದಾರೆ.
ಕೆರೆಯ ಜಾಗ ಸರ್ವೇ ಮಾಡಲು ಆದೇಶ ಮಾಡಿರುವ ತಹಸೀಲ್ದಾರ್, ಕೆರೆ ಪ್ರದೇಶಕ್ಕೆ ಯಾರೂ ಪ್ರವೇಶ ಮಾಡದಂತೆ ಕಬ್ಬಿಣದ ಸರಳುಗಳನ್ನು ಹಾಕಿಸಿ ಸೀಜ್ ಮಾಡಿಸಿದ್ದಾರೆ.
ಖಾಸಗಿ ಕಂಪನಿ ಹಾಗೂ ಕೆಲ ಬಿಲ್ಡರ್‌ಗಳು ಮಣ್ಣನ್ನು ಲಾರಿಗಳಲ್ಲಿ ತಂದು ಕೆರೆಗೆ ತುಂಬಿಸಿ ಅದನ್ನು ಒತ್ತುವರಿ ಮಾಡುತ್ತಿದ್ದರು. ಈ ಬಗ್ಗೆ ಆರೋಪ ಕೇಳಿಬಂದ ಕೂಡಲೇ ಆನೆಕಲ್ ತಹಸೀಲ್ದಾರ್ ಎಚ್ಚೆತ್ತುಕೊಂಡು ಕೆರೆ ಉಳಿಸಿದ್ದಾರೆ.