ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಕ್ಕೆ ನ್ಯಾಯಮೂರ್ತಿ ವಿರುದ್ಧ ರಸ್ತೆಗಿಳಿದ ಆಟೋ ಚಾಲಕರು
ಧಾರವಾಡ: ರಾಯಚೂರಿನ ನ್ಯಾಯಾಧೀಶ ಮಲಿಕಾರ್ಜುನಗೌಡ ಡಾ. ಬಾಬಾ ಸಹೇಬ್ ಅಂಬೇಡ್ಕರವರಿಗೆ ಅಪಮಾನ ಮಾಡಿರುವ ನಡೆ ಖಂಡಿಸಿ ಹಾಗೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಧಾರವಾಡದಲ್ಲಿ ಅಟೋ ಚಾಲಕರು ಹಾಗೂ ಮಾಲೀಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಅಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನ್ಯಾಯಾಧೀಶ ಮಲಿಕಾರ್ಜುನಗೌಡ ಅಣಕು ಶವಯಾತ್ರೆ ಮಾಡಿ, ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಸರಿ ದಾರಿಗೆ ತರಬೇಕಾದ ನ್ಯಾಯಾಧೀಶರೇ ಸಂವಿಧಾನ ಶಿಲ್ಫಿ ಡಾ.ಬಾಬಾ ಸಾಹೇಬ್ ಅಂಬೇಡ್ಕರವರಿಗೆ ಅಪಮಾನ ಮಾಡುತ್ತಾರೆ ಎಂಬುದನ್ನು ರಾಜ್ಯದ ಜನತೆ ನಿರೀಕ್ಷೆ ಮಾಡಿರಲಿಲ್ಲ. ರಾಯಚೂರಿನ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ್ದಾರೆ. ಆದರೆ ಈ ನಡೆಯ ವಿರುದ್ಧ ರಾಜ್ಯ ಸೇರಿ ದೇಶದ ಹಲವು ಕಡೆಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಇಷ್ಟಾದರೂ ಕೂಡಾ ರಾಜ್ಯ ಸರ್ಕಾರ ಹಾಗೂ ಕಾನೂನು ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಮುಖ್ಯಮಂತ್ರಿಗಳು ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು.
ಒಂದು ವೇಳೆ ರಾಜ್ಯ ಸರ್ಕಾರ ಹಾಗೂ ಕಾನೂನು ಸಚಿವರು ಯಾವುದೇ ಕ್ರಮಕ್ಕೆ ಮುಂದಾಗದಿದ್ದಲ್ಲಿ, ಮುಂದಿನ ಹೋರಾಟದ ರೂಪರೇಷೆಗಳನ್ನು ದೊಡ್ಡ ಮಟ್ಟಿಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು