ಸರ್ಕಾರದ ಸಾಧನೆ ಪುಸ್ತಕ; ಸಾಧನೆಗಿಂತ ಭರವಸೆಗಳೇ ಹೆಚ್ಚಿವೆ ಎಂದ ಸಿದ್ದರಾಮಯ್ಯ
ಬೆಂಗಳೂರು: ಬೊಮ್ಮಾಯಿ ಅವರದು ಹಿಂದಿನ ಯಡಿಯೂರಪ್ಪ ಸರ್ಕಾರದ ಮುಂದುವರೆದ ಭಾಗವೇ ಹೊರತು ಹೊಸ ಸರ್ಕಾರವೇನಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 2018 ರಲ್ಲಿ ಬಿಜೆಪಿಯವರು ಜನರಿಗೆ ನೀಡಿದ್ದ ಚುನಾವಣಾ ಪ್ರಣಾಳಿಕೆಗೆ ಯಡಿಯೂರಪ್ಪ ಸರ್ಕಾರದಷ್ಟೇ ಬೊಮ್ಮಾಯಿ ಅವರ ಸರ್ಕಾರಕ್ಕೂ ಅನ್ವಯವಾಗುತ್ತದೆ ಎಂದರು.
ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ರೂ. 1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂದರೆ ವರ್ಷಕ್ಕೆ ಕನಿಷ್ಠ 30 ಸಾವಿರ ಕೋಟಿ ಖರ್ಚು ಮಾಡಬೇಕು. ಆದರೆ ಈ ವರ್ಷ ಸರ್ಕಾರ ಖರ್ಚು ಮಾಡಿರೋದು 6,300 ಕೋಟಿ ರೂಪಾಯಿ ಮಾತ್ರ. ರಾಜ್ಯ ಸರ್ಕಾರ ತನ್ನ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದೆ. ಆದರೆ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಜಾಸ್ತಿ ಇವೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಅಮೃತ ಯೋಜನೆಯಡಿ 25 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ. 750 ಶಾಲೆಗಳಿಗೆ ತಲಾ ಹತ್ತು ಲಕ್ಷ ಹಣ ಖರ್ಚು ಮಾಡುತ್ತೇವೆ. ಐದು ಲಕ್ಷ ಮನೆ ನಿರ್ಮಿಸುತ್ತೇವೆ. ಅಮೃತ ಗ್ರಾಮಗಳನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡಲಾಗಿದೆ. ಉದಾಹರಣೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹೆಚ್.ಕೆ ಪಾಟೀಲ್ ಅವರು ಗ್ರಾಮೀಣ ಸೇವಾ ಕೇಂದ್ರಗಳನ್ನು ಆರಂಭಿಸಿದ್ದರು. ಈಗ ಅವನ್ನು ಗ್ರಾಮ ಒನ್ ಎಂದು ಹೆಸರು ಬದಲಾವಣೆ ಮಾಡಿದಾರೆ. ಇದು ಸಾಧನೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರ್ಕಾರ ತನ್ನ ಜಾಹಿರಾತಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದೆ. ಈ ವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರೋದು 1200 ಕೋಟಿ ರೂಪಾಯಿ ಮಾತ್ರ. ಈ ಆರ್ಥಿಕ ವರ್ಷದಲ್ಲಿ ಉಳಿದಿರೋದು ಇನ್ನು ಎರಡು ತಿಂಗಳು ಮಾತ್ರ. ಮುಂದೆ ಒಂದು ರೂಪಾಯಿಯೂ ಬಿಡುಗಡೆ ಆಗಲ್ಲ, ಹೈದ್ರಾಬಾದ್ ಕರ್ನಾಟಕ ಎಂದು ಹೆಸರು ಬದಲಿಸಿದ್ದೊಂದೆ ಲಾಭ ಅಷ್ಟೆ. ಹಣಕಾಸಿನ ಲಾಭ ಏನೂ ಇಲ್ಲ ಎಂದರು.