Districts

ನಾನು ಗಲಭೆ ನಿಯಂತ್ರಿಸಲು ಪೊಲೀಸ್‌ ವಾಹನ ಹತ್ತಿದ್ದೆ; ಅಲ್ತಾಫ್‌ ಹಳ್ಳೂರ್‌ ಸ್ಪಷ್ಟನೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ನಿಯಂತ್ರಿಸಲು ನಾನು ಪೊಲೀಸ್ ವಾಹನದ ಮೇಲೆ ಹತ್ತಿದ್ದೆ. ನಾನು ಯಾವುದೇ ಕಾರಣಕ್ಕೂ ಪ್ರಚೋದನೆ ನೀಡಲು ಅಲ್ಲಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಮೇಲೂ ಕಲ್ಲು ತೂರಾಟ ನಡೆದಿದೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಗಲಭೆ ಸಂದರ್ಭದಲ್ಲಿ ನಾನು ಸ್ಥಳದಲ್ಲಿದ್ದೆ. ಪೊಲೀಸ್‌ ವಾಹನ ಮೇಲೆ ಹತ್ತಿ ಗಲಭೆ ನಿಯಂತ್ರಿಸಲು ಪ್ರಯತ್ನಪಟ್ಟಿದ್ದೇನೆ. ನಾನು ಯಾರಿಗೂ ಪ್ರಚೋದನೆ ನೀಡಿಲ್ಲ. ಗಲಾಟೆ ಮಾಡಬೇಡಿ ಎಂದು ನಮ್ಮ ಜನರಿಗೆಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಜನರಿಗೆ ಧ್ವನಿ ಕೇಳುತ್ತದೆ ಎಂಬ ಕಾರಣಕ್ಕೆ ಪೊಲೀಸ್ ವಾಹನ ಏರಿದ್ದೆ. ಗಲಭೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಸ್ಥಳೀಯರು ಇರಲಿಲ್ಲ ಎಂದು ಹೇಳಿದ್ದಾರೆ.

ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಸ್ಥಳೀಯರಲ್ಲ. ಬೇರೆ ಬೇರೆ ಸಂಘಟನೆಯವರು ಕಲ್ಲು ತೂರಾಟ ನಡೆಸಿದ್ದಾರೆ. ನನಗೂ ಕೂಡ ಗಾಯಗಳಾಗಿವೆ. ನಾನು ಯಾವುದೇ ಕಾರಣಕ್ಕೂ ಗಲಭೆ ಸೃಷ್ಟಿಸುವ ಹಾಗೂ ದೇಶ ದ್ರೋಹದ ಕೆಲಸವನ್ನು ಮಾಡುವುದಿಲ್ಲ ಎಂದು ಅಲ್ತಾಫ್‌ ಹಳ್ಳೂರ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಿ ಎಂದು ಅವರು ಮನವಿ ಮಾಡಿದ್ದಾರೆ. ಗಲಾಟೆ ಮಾಡಿದವರ ಬಗ್ಗೆ ನನಗೆ ಗೊತ್ತಿರುವಷ್ಟು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದೇನೆ. ನಮಗೆ ಶಾಂತಿ ಮತ್ತು ಸೌಹಾರ್ದ ಮುಖ್ಯವಾಗಿದೆ. ನಾನು ಯಾವುದೇ ಕಾರಣಕ್ಕೂ ಪ್ರಚೋದನೆ ನೀಡಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಗಲಭೆಗೆ ಪ್ರಚೋದನೆ ನೀಡದ ಆರೋಪದ ಮೇಲೆ ಅಲ್ತಾಫ್‌ ಹಳ್ಳೂರ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೌಲ್ವಿ ವಸೀಂ ಪಠಾಣ್‌, ಕಾರ್ಪೊರೇಟರ್‌ ಆರೀಫ್‌ ವಿರುದ್ಧವೂ ಪೊಲೀಸರು 141, 143, 307ರ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.

Share Post