ಉಗ್ರರ ಸಂಚು ವಿಫಲಗೊಳಿಸಿದ ಎನ್‌ಐಎ; ಹೈದರಾಬಾದ್‌ನಲ್ಲಿ 5 ಉಗ್ರರ ಅರೆಸ್ಟ್
ಹೈದರಾಬಾದ್; ದೇಶದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದವರನ್ನು ಬಂಧಿಸಲಾಗಿದೆ. ಹಿಜ್ಬ್-ಉತ್-ತಹ್ರೀರ್ ಸಂಪರ್ಕ ಹೊಂದಿದ್ದವರನ್ನು ದೇಶದ ವಿವಿಧೆಡೆ ಪೊಲೀಸರು ಬಂಧಿಸಿದ್ದು, ಮುಂದೆ ಆಗಬಹುದಿದ್ದ ಅನಾಹುತಗಳನ್ನು ತಡೆದಿದ್ದಾರೆ.
ದಾಳಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ 11 ಜನರನ್ನು ಬಂಧಿಸಲಾಗಿದೆ. ಹೈದರಾಬಾದ್‌ನಲ್ಲಿ 5 ಮತ್ತು ಭೋಪಾಲ್‌ನಲ್ಲಿ ಒಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮತ್ತೊಮ್ಮೆ ಸುದ್ದಿಯಾಗಿರುವುದು ಆತಂಕಕಾರಿಯಾಗಿದೆ. ಈ ಗುಂಪಿನಲ್ಲಿ 17 ಜನರಿದ್ದು, ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಅವರೊಂದಿಗೆ ಯಾರಿಗೆ ಸಂಬಂಧವಿದೆ? ಈ ತಂಡ ಎಷ್ಟು ಜನರಿಗೆ ತರಬೇತಿ ನೀಡಿದೆ? ಅವರ ಸಂಪೂರ್ಣ ಯೋಜನೆ ಏನು ಎಂಬ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ.
ಭಯೋತ್ಪಾದನೆಯ ಸಂಚಿನ ಭಾಗವಾಗಿ ಭೋಪಾಲ್‌ನಿಂದ ಯಾಸಿರ್ ಎಂಬ ವ್ಯಕ್ತಿಯನ್ನು ಹೈದರಾಬಾದ್‌ಗೆ ಕಳುಹಿಸಲಾಗಿತ್ತು. ಮತ್ತೊಬ್ಬ ಸಲೀಂ ವಿದ್ಯಾವಂತ. ಉಳಿದವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ವೈದ್ಯಾಧಿಕಾರಿಗಳನ್ನು ಬಲೆಗೆ ಬೀಳಿಸಲು ಸಲೀಂ ಅಲ್ಲಿಗೆ ಬಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಲೀಂ ಐದು ವರ್ಷಗಳಿಂದ ಸ್ಥಳೀಯವಾಗಿ ನೆಲೆಸಿದ್ದು, ಆತ್ಮಹತ್ಯಾ ಬಾಂಬರ್‌ಗಳು, ಗ್ರೆನೇಡ್ ದಾಳಿ ಮತ್ತು ರಾಸಾಯನಿಕ ದಾಳಿಯ ಬಗ್ಗೆ ತರಬೇತಿ ಪಡೆದಿದ್ದಾನೆ ಎನ್ನಲಾಗಿದೆ.
ಬಯಾನ್ ಹೆಸರಲ್ಲಿ ಸಭೆಗಳನ್ನೂ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸಭೆಗಳಿಗೆ ಹೋದವರ ವಿವರಗಳನ್ನು ಎನ್ಐಎ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ದಕ್ಕನ್ ಕಾಲೇಜಿನ ಎಚ್‌ಎಡಿ ಆಗಿರುವ ಸಲೀಂ ಅವರ ಮನೆಯಲ್ಲಿಯೇ ಹೆಚ್ಚಿನ ಸಭೆಗಳು ನಡೆಯುತ್ತಿದ್ದವು ಎನ್ನಲಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತಿದೆ.