CrimeDistricts

ಮಹಿಳೆ ಮೇಲೆ ಆಗಂತುಕನಿಂದ ಅತ್ಯಾಚಾರ ಯತ್ನ; ಅಡ್ಡ ಬಂದ ಪತಿಗೆ ಮಚ್ಚಿನೇಟು!

ಮೈಸೂರು; ಮುಳ್ಳು ತಂತಿ ಹಾರಿಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯ ಗಂಡ ಅಡ್ಡಬಂದಿದ್ದು, ಕಾಮುಕ ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ.

ಮೈಸೂರು ಮೂಲದ ದಂಪತಿ ನಂಜನಗೂಡಿನ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಹಿಳೆಯ ಪತಿ ಹೊರಹೋಗಿದ್ದ. ಈ ವೇಳೆ ಮಹಿಳೆ ಒಬ್ಬರೇ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಇದನ್ನು ಗಮನಿಸಿದ ಕಾಮುಕ, ಬೇಲಿ ಹಾರಿಬಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಚೀರಿಕೊಂಡಿದ್ದಾಳೆ. ಇದನ್ನು ಕೇಳಿ ಆಕೆಯ ಪತಿ ಓಡಿಬಂದಿದ್ದಾನೆ.

ಈ ವೇಳೆ ಆರೋಪಿ ಮಹಿಳೆಯ ಗಂಡನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈಗ ಸಂತ್ರಸ್ತೆ ಹಾಗೂ ಆಕೆಯ ಗಂಡನನ್ನು ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಲ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನವೀನ್‌ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Share Post