ಸ್ವಾಮೀಜಿ ವೇಷದಲ್ಲಿ ಬಂದು ಕಿರುತೆರೆ ನಟ ರವಿಕಿರಣ್‌ಗೆ ಲಕ್ಷಾಂತರ ರೂ. ಟೋಪಿ!
ಬೆಂಗಳೂರು; ಅನಾಥಾಶ್ರಮ ನಡೆಸುತ್ತೇನೆ ಎಂದು ಸ್ವಾಮೀಜಿ ವೇಷದಲ್ಲಿ ವಕ್ಕರಿಸಿದ ವ್ಯಕ್ತಿಯೊಬ್ಬ ಕಿರುತೆರೆಯ ಹಿರಿಯ ನಟ, ನಿರ್ದೇಶಕ ರವಿಕಿರಣ್ ಅವರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಾಗಿರುವ ರವಿಕಿರಣ್‍ಗೆ ನವೀನ್ ಭಾಗ್ಯಶ್ರೀ ಗುರೂಜಿ ಎಂಬುವವರು ಎರಡು ವರ್ಷದ ಹಿಂದೆ ಪರಿಚಯವಾಗಿದ್ದಾರೆ. ಅನಾಥಾಶ್ರಮ ನಡೆಸುತ್ತೇನೆ ಎಂದು ಪರಿಚಯಿಸಿಕೊಂಡಿದ್ದ ಇವರಿಗೆ ಮೊದಲಿಗೆ ರವಿಕಿರಣ್ ಅವರು ಎರಡೂವರೆ ಸಾವಿರ ರೂಪಾಯಿ ಹಣವನ್ನು ಗೂಗಲ್ ಪೇ ಮಾಡಿದ್ದರು.
ಅನಂತರ ಇದೇ ನೆಪದಲ್ಲಿ ರವಿಕಿರಣ್‌ಗೆ ಹತ್ತಿರವಾದ ಈ ಗುರೂಜಿ, ದುಬೈನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದ್ದು, ಅದಕ್ಕೆ ನೀವು ಚೀಫ್ ಗೆಸ್ಟ್ ಆಗಿ ಹೋಗಬೇಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ರವಿಕಿರಣ್‌ಮ ಫ್ಲೈಟ್ ಟಿಕೆಟ್ ಮಾಡಿಸೋಕೆ ಅಂತ 25 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಅನಂತರ ಬೇರೆ ಬೇರೆ ರೂಪದಲ್ಲಿ ಆ ಗುರೂಜಿ ಎನಿಸಿಕೊಂಡಾತ ಹಣ ಪೀಕಿದ್ದಾನೆ. ಅನಂತರ ದುಬೈನಲ್ಲಿ ಸ್ನೇಹಿತರೊಬ್ಬರಿದ್ದಾರೆ. ಅವರ ಬಳಿಯಿಂದ ಕಡಿಮೆ ಬೆಲೆಗೆ ಚಿನ್ನ ಕೊಡಿಸೋದಾಗಿ ಹೇಳಿ 42 ಸಾವಿರ ರೂ ಒಮ್ಮೆ ಹಾಗೂ 87 ಸಾವಿರ ರೂಪಾಯಿ ಒಮ್ಮೆ ರವಿ ಕಿರಣ್ ಅವರಿಂದ ಹಣ ಪಡೆದಿದ್ದಾರೆ.
ಕೊನೆಗೂ ಚಿನ್ನವನ್ನೂ ಕೊಟ್ಟಿಲ್ಲ. ಅನಂತರ ನೀವು ಕೊಟ್ಟ ಹಣಕ್ಕೆ ಹೊಸಕೋಟೆ ಬಳಿ ಒಂದು ಸೈಟ್ ಕೊಡಿಸೋದಾಗಿ ನಂಬಿಸಿದ್ದಾನೆ. ಅನಂತರ ರಿಜಿಸ್ಟ್ರೇಷನ್‌ಗೆ ಹಣ ಬೇಕು ಅಂತ ವಸೂಲಿ ಮಾಡಿದ್ದಾನೆ. ಅನಂತರವೂ ನಾಟಕ ಮಾಡಿದ ಆತ, ಏರ್‌ಪೋರ್ಟ್ ರೋಡ್‌ನಲ್ಲಿ ಸೈಟ್ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ ನಂಬಿಸಿ ರವಿಕಿರಣ್ ಅವರಿಂದ ಒಟ್ಟು 4 ಲಕ್ಷದ 35 ಸಾವಿರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ.
ಈ ಸಂಬಂಧ ರವಿಕಿರಣ್ ಅವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಪತ್ನಿ ಚೈತ್ರಾ, ಮಧ್ಯವರ್ತಿ ಸೇರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈಗ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.