ಈತ ಅಂತಿಂಥಾ ಕಳ್ಳನಲ್ಲ.. 5 ಸಾವಿರ ಕಾರುಗಳನ್ನು ಕದ್ದಿದ್ದ..!
ನವದೆಹಲಿ; ನೀವು ನಾನಾ ರೀತಿಯ ಕಳ್ಳರನ್ನು ನೋಡಿರಬಹುದು. ಆದ್ರೆ ಈತ ನೀವು ನೋಡಿದ ಎಲ್ಲರಿಗಿಂತ ಚಾಲಾಕಿ ಕಳ್ಳ.. ಈತ ಬರೋಬ್ಬರಿ ಐದು ಸಾವಿರ ಕಾರುಗಳನ್ನು ಕದ್ದಿದ್ದ. ಇದೀಗ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಹೌದು, 5 ಸಾವಿರ ಕಾರುಗಳನ್ನು ಕದ್ದಿದ್ದ ಭಾರತದ ಅತಿದೊಡ್ಡ ಕಾರು ಕಳ್ಳ ನೆಂಬ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಚೌಹಾಣ್ (52) ಎಂಬಾತನೇ ಬಂಧಿತ ಆರೋಪಿ. ಈತ 180 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೊನೆಗೂ ಆರೋಪಿ ಸಿಕ್ಕಿಬಿದ್ದಿದ್ದು, ಆತನಿಂದ ಪೊಲೀಸರು ಆರು ದೇಸಿ ನಿರ್ಮಿತ ಪಿಸ್ತೂಲ್ಗಳು ಮತ್ತು ಏಳು ಜೀವಂತ ಮದ್ದು ಗುಂಡು, ಒಂದು ಕದ್ದ ಬೈಕನ್ನು ವಶ ಪಡಿಸಿಕೊಂಡಿದ್ದಾರೆ.
ಅಸ್ಸಾಂನ ತೇಜ್ಪುರ ಮೂಲದ ಖಾನ್ಪುರ ಎಕ್ಸ್ಟೆನ್ಶನ್ನ ನಿವಾಸಿ ಅನಿಲ್ ಚೌಹಾಣ್ 12 ನೇ ತರಗತಿಯವರೆಗೆ ಓದಿದ್ದಾನೆ. 1998 ರಲ್ಲಿ ವಾಹನಗಳನ್ನು ಕದಿಯಲು ಪ್ರಾರಂಭಿಸಿದ ಈತ ಇಲ್ಲಿಯವರೆಗೆ 5000 ಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ ಎಂದು ಹೇಳಲಾಗಿದೆ. ಅನಿಲ್ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಕೇಸ್ನಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ. ಈತನ ಮೇಲೆ 180 ಕ್ರಿಮಿನಲ್ ಕೇಸ್ ದಾಖಲಾಗಿದೆ.
ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ಅನಿಲ್ ಚೌಹಾಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಆಧಾರಿಸಿ ಡಿಬಿಜಿ ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಅನಿಲ್ ಚೌಹಾಣ್ನನ್ನು ಆಗಸ್ಟ್ 23 ರಂದು ಬಂಧಿಸಲಾಗಿದೆ.