11 ವರ್ಷಕ್ಕೇ ಮದುವೆ, 18ಕ್ಕೆ ಮಗು, ಈಗ NEETನಲ್ಲಿ ಯಶಸ್ಸು ಕಂಡ..!
ಕೋಟಾ; ಉತ್ತರ ಭಾರತದಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಕಠಿಣ ಕಾನೂನು ರೂಪಿಸಿದ್ದರೂ ಕೂಡಾ ನಮ್ಮ ದೇಶದಲ್ಲಿ ಬಾಲ್ಯ ವಿವಾಹಗಳು ನಿಂತಿಲ್ಲ. ಹಾಗೇ 11 ವರ್ಷಕ್ಕೇ ಮದುವೆಯಾದ ಬಾಲಕನೊಬ್ಬ ಸಂಸಾರದ ಜಂಜಾಟದ ನಡುವೆಯೂ ನೀಟ್ ಪರೀಕ್ಷೆ ಪಾಸಾಗಿ ವೈದ್ಯನಾಗುವ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾನೆ. ರಾಜಸ್ಥಾನದ ಕೋಟಾದ ರಾಮ್‌ಲಾಲ್ ಭೋಯ್ ಎಂಬಾತನೇ ನೀಟ್ ಪರೀಕ್ಷೆ ಪಾಸ್ ಮಾಡಿರುವ ಯುವಕ.
ಚಿತ್ತೋರ್ ಗಢ ಜಿಲ್ಲೆಯ ಘೋಸುಂದಾ ಗ್ರಾಮದ ರಾಮ್‌ಲಾಲ್ ಭೋಯ್‌ಗೆ ಪೋಷಕರು ಆರನೇ ತರಗತಿಯಲ್ಲಿದ್ದಾಲೇ ಮದುವೆ ಮಾಡಿದ್ದರು. ಅಂದರೆ ಆಗ ರಾಮ್‌ಲಾಲ್ ಬೋಯ್‌ಗೆ 11 ವರ್ಷ ವಯಸ್ಸಾಗಿತ್ತು. 18 ವರ್ಷ ತುಂಬುವುದರೊಳಗೆ ಇವರಿಗೆ ಹೆಣ್ಣು ಮಗು ಜನಿಸಿತು.
ಈ ನಡುವೆ ರಾಮ್‌ಲಾಲ್ ನೀಟ್ ಪರೀಕ್ಷೆ ಬರೆದು ವೈದ್ಯನಾಗುವ ಕನಸು ಕಂಡಿದ್ದ. ಅದಕ್ಕಾಗಿ ಆತ ಮೂರು ಬಾರಿ ನೀಟ್ ಪರೀಕ್ಷೆ ಬರೆದ. ಆದ್ರೆ ಪಾಸ್ ಆಗೋದಕ್ಕೆ ಸಾಧ್ಯವಾಗಲಿಲ್ಲ. ಆಗ ಪೋಷಕರು ಇನ್ನು ಸಾಕು ಸಂಸಾರ ನಿಭಾಯಿಸುವುದನ್ನು ನೋಡಿಕೊಂಡು ಎಂದರು. ಆದ್ರೆ ಛಲಬಿಡದ ರಾಮ್‌ಲಾಲ್ ಈಗ ಉಚಿತ ಕೋಚಿಂಗ್ ಪಡೆದು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾನೆ.