ಎರಡನೇ ವಾರಕ್ಕೇ ಕುಂದಿದ ʻಶಕ್ತಿʼ; ಮೆಜೆಸ್ಟಿಕ್, ಸ್ಯಾಟಲೈಟ್‌ನಲ್ಲಿ ಖಾಲಿ ನಿಂತ ಬಸ್‌ಗಳು..!
ಬೆಂಗಳೂರು; ಏನೇ ಆದರೂ ಆರಂಭದಲ್ಲಿ ಎಲ್ಲರಿಗೂ ಆಸಕ್ತಿ, ಉತ್ಸಾಹ, ಕುತೂಹಲ ಇರುತ್ತದೆ. ನಂತರ ಅದೆಲ್ಲಾ ಕಡಿಮೆಯಾಗುತ್ತಾ ಹೋಗುತ್ತದೆ. ಶಕ್ತಿ ಯೋಜನೆಯೂ ಹಾಗೇ ಆಗಿದೆ. ಯೋಜನೆ ಜಾರಿ ಮಾಡಿದ ಮೊದಲ ವಾರದಲ್ಲಿ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ತುಂಬಿ ತುಳುಕುತ್ತಿದ್ದರು. ಆದ್ರೆ ಎರಡನೇ ವಾರಕ್ಕೇ ಮಹಿಳೆಯರಿಗೆ ನಿರುತ್ಸಾಹ ಬಂದಿದೆ. ಆಗಲೇ ಬಸ್‌ಗಳು ಖಾಲಿ ಹೊಡೆಯುತ್ತಿವೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಎರಡನೇ ವೀಕೆಂಡ್ ಇದು. ಹೀಗಾಗಿ, ಈ ಶನಿವಾರ ಹಾಗೂ ಭಾನುವಾರ ಮಹಿಳಾ ಪ್ರಯಾಣಿಕರು ಹೆಚ್ಚಿರುತ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಬೆಂಗಳೂರು ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದವು.
ಮೊದಲ ವಾರದಲ್ಲಿ ಮಹಿಳೆಯರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು. ಆದ್ರೆ ಈಗ ಆಷಾಢ ಬಂದಿದೆ. ಆಷಾಢದಲ್ಲಿ ತೀರ್ಥ ಕ್ಷೇತ್ರಗಳಿಗೆ ಹೋಗುವುದು ಕಡಿಮೆ. ಈ ಕಾರಣಕ್ಕೋ ಏನೋ ಈ ವಾರದ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಡ್ರೈವರ್ ಹಾಗೂ ಕಂಡಕ್ಟರ್‌ಗಳು ಬಸ್‌ಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಕಾಯುವಂತಾಗಿದೆ.