ಸ್ವಾತಂತ್ರ್ಯೋತ್ಸವ ದಿನದಂದು ದಾಳಿಗೆ ಸ್ಕೆಚ್; ಐಸಿಸ್ ನಂಟಿರುವ ಸಂಚುಕೋರನ ಬಂಧನ
ಲಖನೌ ; 75ನೇ ಸ್ವಾತಂತ್ರ್ಯವಕ್ಕೆ ದೇಶಾದ್ಯಂತ ಸಿದ್ಧತೆ ನಡೆದಿದೆ. ಈ ನಡುವೆ ಉಗ್ರರು ಸ್ವಾತಂತ್ರ್ಯ ದಿನಾಚರಣೆ ಮೇಲೆ ಕಣ್ಣಿಟ್ಟಿದ್ದಾರೆ. ಆಗಸ್ಟ್ 15 ರಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದವನೊಬ್ಬನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಸಬಾವುದ್ದಿನ್ ಅಜ್ಮಿ ಅಲಿಯಾಸ್ ಬೈರೋನ್ ಖಾನ್ ಬಂಧಿತ ಆರೋಪಿ. ಈತ ಅಸಾದುದ್ದಿನ್ ಒವೈಸ್ ನೇತೃತ್ವದ ಎಂಐಎಂ ಪಕ್ಷದ ಸದಸ್ಯನಾಗಿದ್ದು, ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾನೆ ಎಂದು ತಿಳಿದುಬಂದಿದೆ.
ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಬಾವುದ್ದೀನ್ ಅಜ್ಮಿ ಆಲಿಯಾಸ್ ಬೈರೋನ್ ಖಾನ್ ಅಜಂಗಢ ಜಿಲ್ಲೆಯ ಅಮಿಲೋ ಪ್ರದೇಶದ ನಿವಾಸಿಯಾಗಿದ್ದಾನೆ. ಉಗ್ರ ಸಬಾವುದ್ದೀನ್ ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರನ್ನು ಕೊಲೆ ಮಾಡುವ ಟಾಸ್ಕ್ ನೀಡಲಾಗಿತ್ತು. ಹೀಗಾಗಿ ಆರ್‌ಎಸ್‌ಎಸ್ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಮತ್ತು ಫೇಸ್‌ಬುಕ್ ಖಾತೆಯನ್ನು ರಚಿಸಿ ಅದರಿಂದ ನಾಯಕರ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಮುಂಬೈನಲ್ಲಿ ಈ ಮೊದಲು ಎಲೆಕ್ಟ್ರೀಷಿಯನ್ ಆಗಿದ್ದ ಉಗ್ರ ಅಜ್ಮಿ ಐಸಿಸ್ ವಿಚಾರಧಾರೆಗಳಿಗೆ ಒಳಗಾಗಿ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್, ಷರಿಯಾ ಕಾನೂನು ಜಾರಿ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದ. ಜನರಿಗೆ ಹಲವು ಆಮಿಷವೊಡ್ಡಿ ಸಾಮಾಜಿಕ ಮಾಧ್ಯಮಗಳಲ್ಲಿ ಐಸಿಸ್ ಬಗ್ಗೆ ಪ್ರಚಾರ ಮಾಡಲು ಪ್ರೇರೇಪಿಸುತ್ತಿದ್ದ. ಈತನೂ ಹಲವಾರು ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದ.