Crime

3 ಸಾವಿರ ಕೋಟಿ ಹವಾಲಾ ದಂಧೆ: ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು: ಅನುಮಾನಾಸ್ಪದವಾಗಿ ಹಣ ಡೆಪಾಸಿಟ್‌ ಮಾಡುತ್ತಿದ್ದ ಪ್ರಕರಣದ ಬೆನ್ನು ಹತ್ತಿದ್ದ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಬೃಹತ್‌ ಹವಾಲಾ ದಂಧೆಯನ್ನು ಪತ್ತೆ ಮಾಡಿದ್ದಾರೆ. ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಹವಾಲಾ ವ್ಯವಹಾರ ನಡೆದಿರುವುದು ಇದರಿಂದ ಬಯಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಪ್ರಕರಣವನ್ನು ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣ ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಕೋಟಿ ಮೊತ್ತದ ಹವಾಲಾ ದಂಧೆ  ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಹಾಗೂ ದುಬೈ ನಡುವೆ ಈ ಹವಾಲಾ ವ್ಯವಹಾರ ನಡೆದಿದೆ ಎಂದು ತಿಳಿದುಬಂದಿದೆ.  ಪ್ರಕರಣದ ತನಿಖೆ ನಡೆಸಿದಾಗ ದುಬೈನಿಂದ ಸೂಚನೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿರುವ ಗ್ಯಾಂಗ್ ಗೆ ಲಕ್ಷ ಲಕ್ಷ ಹಣ ತಲುಪುತ್ತಿತ್ತು. ಆ ಹಣವನ್ನು ಕೇರಳ ಮೂಲದ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಎಟಿಎಂಗಳಲ್ಲಿ ಇರುವ ಸಿಡಿಎಂ ಯಂತ್ರಗಳ ಮೂಲಕ ತುಂಬಲಾಗುತ್ತಿತ್ತು. ಕೇವಲ 10 ಬ್ಯಾಂಕ್ ಖಾತೆಗಳಲ್ಲಿ 34 ಕೋಟಿ ರೂ. ವಹಿವಾಟು ನಡೆದಿರುವ ಸಂಗತಿ ಬಯಲಾಗಿದೆ.

ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 2684 ಬ್ಯಾಂಕ್‌ ಖಾತೆಗಳ ವಿವರ ನೀಡುವಂತೆ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. ಈ ಖಾತೆಗಳ ಮೂಲಕ  3 ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಎಟಿಎಂಗಳಲ್ಲಿ ಹಣ ತುಂಬುತ್ತಿದ್ದ ನಾಲ್ವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಿಯಾಜ್ ಎಂಬಾತ ದುಬೈನಲ್ಲಿ ಕೂತು ಹವಾಲಾ ದಂಧೆ ನಿರ್ವಹಣೆ ಮಾಡುತ್ತಿದ್ದ. ಹವಾಲಾ ಮೂಲಕ ದಿನಕ್ಕೆ 40 ಲಕ್ಷ ರೂಪಾಯಿಯನ್ನು ವಿವಿಧ ಖಾತೆಗಳಿಗೆ ಹಾಕುವ ಮೂಲಕ ವೈಟ್ ಮಾಡಿಸುತ್ತಿದ್ದ ಕಿಂಗ್ ಪಿನ್ ರಿಯಾಜ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ದುಬೈನಿಂದ ಆಪರೇಟ್ ಆಗ್ತಿರೋ ಈ ಬ್ಲಾಕ್ ಅಂಡ್ ವೈಟ್ ದಂಧೆ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ. ಆದರೆ ದುಬೈನಲ್ಲಿರುವವರ ಸೂಚನೆ ಮೇರೆಗೆ ಕೇರಳಕ್ಕೆ ಹಣ ಬರುತ್ತಿತ್ತು. ಕೇರಳದಿಂದ ಬೆಂಗಳೂರಿಗೆ ರವಾನೆಯಾಗುತ್ತಿದ್ದ ಹಣವನ್ನು ಎಟಿಎಂ ಕೇಂದ್ರಗಳ ಸಿಡಿಎಂ ಮೂಲಕ ಸುಮಾರು 25 ಬ್ಯಾಂಕ್ ಗಳಿಗೆ ಸಂಬಂಧಿಸಿದ 3000 ಬ್ಯಾಂಕ್ ಖಾತೆಗಳಿಗೆ ತುಂಬಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಅನೇಕ ವರ್ಷಗಳಿಂದ ಈ ದಂಧೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ತುಂಬಲಿಕ್ಕಾಗಿಯೇ ಕೇರಳ ಮೂಲದ ನಾಲ್ವರು ಯುವಕರನ್ನು ಬೆಂಗಳೂರಿನಲ್ಲಿರಿಸಲಾಗಿದೆ.

 

Share Post