CinemaNational

ಕತ್ರೀನಾ ಕೈಫ್‌ ಮದುವೆಗೆ ರಸ್ತೆ ಬಂದ್‌; ವಕೀಲನಿಂದ ದೂರು ದಾಖಲು

ಜೈಪುರ: ರಾಜಸ್ಥಾನದ ಜೈಪುರ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಸಮಾರಂಭ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ವರ್ಷದಲ್ಲಿ ಬಾಲಿವುಡ್‌ನ ಕೊನೆಯ ಮದುವೆಯಾಗಿದ್ದು, ಈಗಾಗಲೇ ಸಿನಿಮಾ ಸ್ಟಾರ್‌ ನಟ, ನಟಿಯರೆಲ್ಲಾ ಆಗಮಿಸುತ್ತಿದ್ದಾರೆ. ಇನ್ನು, ಕತ್ರೀನಾ–ವಿಕ್ಕಿ ಮದುವೆಗೆ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ ಎಂದು ತಿಳಿದುಬಂದಿದೆ.


ಡಿಸೆಂಬರ್ 9ರಂದು ಕತ್ರೀನಾ–ವಿಕ್ಕಿ ಮದುವೆ ನಡೆಯಲಿದೆ. ಆದರೆ ಇವತ್ತಿನಿಂದಲೇ ಕಾರ್ಯಕ್ರಮಗಳು ಶುರುವಾಗಿವೆ. ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಶೇರಾ ಟೈಗರ್ ಸೆಕ್ಯುರಿಟಿ ಹೆಸರಿನ ಭದ್ರತಾ ಕಂಪನಿಯನ್ನು ನಡೆಸುತ್ತಿದ್ದಾರೆ. ಅವರ ಬೌನ್ಸರ್‌ಗಳು, ಬಾಡಿಗಾರ್ಡ್‌ಗಳು ವಿಕ್ಕಿ–ಕತ್ರೀನಾ ಮದುವೆಗೆ ವಿಶೇಷ ಭದ್ರತೆ ನೀಡಲಿದ್ದಾರೆ. ಜತೆಗೆ ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡ ಸೆಲೆಬ್ರಿಟಿ ಮದುವೆಗೆ ಭದ್ರತೆ ಒದಗಿಸಲಿದೆ.

ಈ ನಡುವೆ ಕತ್ರೀನಾ ಮದುವೆಗೆ ತೆರಳುವ ಅತಿಥಿಗಳ ಅನುಕೂಲಕ್ಕಾಗಿ ಮತ್ತು ಆಹ್ವಾನಿತರಲ್ಲದವರ ಪ್ರವೇಶವನ್ನು ತಡೆಯುವುದಕ್ಕಾಗಿ ರಾಜಸ್ಥಾನದ ಗ್ರಾಮವೊಂದರಲ್ಲಿ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಮದುವೆಗಾಗಿ ಬರುವ ಅತಿಥಿಗಳು ತಂಗುವ ಹೋಟೆಲ್ ಸಿಕ್ಸ್ ಸೆನ್ಸಸ್ ಸಮೀಪದ ಚೌತ್ ಮಠದ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಅಲ್ಲದೆ, ಅದಕ್ಕಾಗಿ ಹೋಟೆಲ್ ಮ್ಯಾನೇಜರ್ ಮತ್ತು ಮದುವೆಯ ಈವೆಂಟ್ ಮ್ಯಾನೇಜರ್ ಅಲ್ಲಿನ ಜಿಲ್ಲಾಧಿಕಾರಿಯ ಸಹಕಾರವನ್ನೂ ಪಡೆದಿದ್ದಾರೆ ಎನ್ನಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ವಕೀಲ ನೇತ್ರವಿಂದ್ ಸಿಂಗ್ ಜಾದೂನ್ ಎಂಬವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಸಮಾರಂಭಕ್ಕಾಗಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Share Post