ಸಿಎಂ ನಿವಾಸದ ಬಳಿಯೇ ಭದ್ರತಾ ಸಿಬ್ಬಂದಿಯಿಂದ ಗಾಂಜಾ ಮಾರಾಟ..!
ಬೆಂಗಳೂರು: ಅಕ್ರಮ ತಡೆಯುವವರು ಪೊಲೀಸರು. ಆದರೆ ಪೊಲೀಸರೇ ಕಾನೂನು ಉಲ್ಲಂಘಿಸಿದರೆ ಏನು ಗತಿ. ಮೊನ್ನೆಯಷ್ಟೇ ಬೈಕ್‌ಗಳನ್ನು ಕದಿಯಲು ಗ್ಯಾಂಗ್ ಕಟ್ಟಿಕೊಂಡಿದ್ದ ಪೊಲೀಸ್ ಪೇದೆಯೊಬ್ಬ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ. ಈ ಸುದ್ದಿ ಬೆನ್ನಲ್ಲೇ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಅದೂ ಅವರಿಬ್ಬರು, ಮುಖ್ಯಮಂತ್ರಿ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದವರು. ಸಿಎಂ ಮನೆಯ ಭದ್ರತೆಯಲ್ಲಿರುವಾಗಲೇ ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆ ಸಿಬ್ಬಂದಿಯಾದ ಸಂತೋಷ್ ಹಾಗೂ ಶಿವಕುಮಾರ್ ಎಂಬುವವರು ಡ್ರಗ್ಸ್ ಪೆಡ್ಲರ್‌ಗಳ ಮೂಲಕ ಗಾಂಜಾ ಖರೀದಿ ಮಾಡಿ, ಅದನ್ನು ಸಿಎಂ ಬದವರಾಜ ಬೊಮ್ಮಾಯಿಯವರ ಆರ್‌ಟಿ ನಗರದ ನಿವಾಸದ ಬಳಿಯೇ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ. ಅಂದಹಾಗೆ, ಈ ಇಬ್ಬರು ಪೇದೆಗಳು ಅಖಿಲ್ ರಾಜ್ ಹಾಗೂ ಅಮ್ಜದ್ ಎಂಬುವವರಿಂದ ಗಾಂಜಾ ಖರೀದಿ ಮಾಡಿದ್ದರು. ಆದರೆ ಅವರಿಗೆ ಹಣ ನೀಡಿರಲಿಲ್ಲ. ಹಣ ಕೇಳಿದಾಗಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಇದೇ ವೇಳೆ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಅನುಮಾನ ಬಂದು ಅವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಪೊಲೀಸರೇ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ. ಈ ಸಂಬಂಧ ಇಬ್ಬರು ಪೇದೆಗಳು ಹಾಗೂ ಇಬ್ಬರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.