ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಪ್ರಕರಣ; ತೆಲುಗು ನಟಿ ಹೇಮಾ ಅರೆಸ್ಟ್
ಬೆಂಗಳೂರು; ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊರವಲಯದ ತೋಟದ ಮನೆಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಹೇಮಾ ಅವರನ್ನು ಕೊನೆಗೂ ಬಂಧಿಸಲಾಗಿದೆ.. ಇಂದು ಬೆಂಗಳೂರಿನ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ಬಂದಿದ್ದ ಹೇಮಾ ಅವರನ್ನು ಅರೆಸ್ಟ್ ಮಾಡಲಾಗಿದೆ.. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು.. ಈ ಹಿನ್ನೆಲೆಯಲ್ಲಿ ಇಂದು ಅವರು ಸಿಸಿಬಿ ಕಚೇರಿಗೆ ಬಂದು ಹೇಳಿಕೆ ನೀಡಿದರು. ಇದೇ ವೇಳೆ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ..
ರೇವ್ ಪಾರ್ಟಿ ಹೆಸರಲ್ಲಿ ಇಲ್ಲಿ ಡ್ರಗ್ಸ್ ಪಾರ್ಟಿ ಏರ್ಪಡಿಸಲಾಗಿತ್ತು.. ಈ ಪಾರ್ಟಿ ಆಯೋಜನೆಯಲ್ಲಿ ಹೇಮಾ ಅವರು ಕೂಡಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ.. ಜೊತೆಗೆ ಹೇಮಾ ಅವರು ಕೂಡಾ ಡ್ರಗ್ಸ್ ಸೇವನೆ ಮಾಡಿದ್ದರು.. ಅವರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಅವರು ಡ್ರಗ್ಸ್ ಸೇವಿಸಿರುವುದು ಖಾತ್ರಿಯಾಗಿತ್ತು.. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ..
ಹೇಮಾ ಅವರು ಸಿಸಿಬಿ ಪೊಲೀಸರು ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ದಿನ ಅಲ್ಲಿಯೇ ಇದ್ದರು.. ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಸಾರವಾಗುತ್ತಿದ್ದಂತೆ ಅವರು ಅಲ್ಲಿಂದಲೇ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು.. ನಾನು ಹೈದರಾಬಾದ್‌ನ ಫಾರ್ಮ್ ಹೌಸ್‌ನಲ್ಲಿದ್ದೇನೆ.. ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದು ಕೇಳಿಕೊಂಡ ವಿಡಿಯೋ ಅದಾಗಿತ್ತು.. ಮೊದಲಿಗೆ ಎಲ್ಲರೂ ಇದನ್ನು ನಂಬಿದ್ದರು.. ಆದ್ರೆ, ಕೆಲ ಸಮಯದ ನಂತರ ಹೇಮಾ ಬೆಂಗಳೂರಿನ ರೇವ್ ಪಾರ್ಟಿ ಸ್ಥಳದಿಂದಲೇ ವಿಡಿಯೋ ಮಾಡಿ ಯಾಮಾರಿಸಿದ್ದಳು ಅನ್ನೋದು ಗೊತ್ತಾಗಿತ್ತು..
ಬಂಧನದ ಬಳಿಕ ಹೇಮಾ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ..