Crime

ʻಬುಲ್ಲಿ ಬಾಯ್‌ʼ ಬೆನ್ನಲ್ಲೇ ಟೆಲಿಗ್ರಾಂನಲ್ಲಿ ಹಿಂದೂ ಮಹಿಳೆಯರ ಅವಹೇಳನ..!

ಮುಂಬೈ: ಬುಲ್ಲಿಬಾಯ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್‌ ಮಾಡಿ, ಅವರ ಫೋಟೋಗಳನ್ನು ತಿರುಚಿ ಪೋಸ್ಟ್‌ ಮಾಡುತ್ತಿದ್ದ ಬಗ್ಗೆ ಹಲವು ಕೇಸ್‌ಗಳ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ, ಹಿಂದೂ ಮಹಿಳೆಯರನ್ನು ಟಾರ್ಗೆಟ್‌ ಮಾಡುವ ಗುಂಪೊಂದು ಹುಟ್ಟಿಕೊಂಡಿದೆ. ಟೆಲಿಗ್ರಾಂ ಮೊಬೈಲ್‌ ಅಪ್ಲಿಕೇಷನ್‌ನ ಚಾನಲ್‌ ಒಂದರಲ್ಲಿ ಹಿಂದೂ ಮಹಿಳೆಯರ ಅವಹೇಳನ ಮಾಡುವ ಫೋಟೋಗಳನ್ನು ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಆ ಟೆಲಿಗ್ರಾಂ ಚಾನಲ್‌ನ್ನು ಬ್ಲಾಕ್‌ ಮಾಡಲಾಗಿದೆ.

ಹಿಂದೂ ರಂಡಿಯನ್‌ ಹೆಸರಿನ ಟೆಲಿಗ್ರಾಂ ಚಾನಲ್‌ ನಲ್ಲಿ ಹಿಂದೂ ಮಹಿಳೆಯರ ಫೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ. ಆ ಟೆಲಿಗ್ರಾಂ ಚಾನಲ್‌ ಸದಸ್ಯರು ಆ ತಿರುಚಿದ ಫೋಟೋಗಳನ್ನು ಸರ್ಕ್ಯುಲೇಟ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಹಲವರು ಟ್ವೀಟ್‌ ಮಾಡಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ಐಟಿ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕೂಡಲೇ ಆ ಚಾನಲ್‌ ನ್ನು ಬ್ಲಾಕ್‌ ಮಾಡಿಸಿದೆ.

ಈ ಸಂಬಂಧ ದೂರು ಕೂಡಾ ದಾಖಲಾಗಿದೆ. ಇನ್ನು ಬುಲ್ಲಿ ಬಾಯ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್‌ ಮಾಡಿದವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹಾಗೂ ಒಬ್ಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಬಂಧಿತ ಯುವತಿಯೇ ಇದರ ಮಾಸ್ಟರ್‌ ಮೈಂಡ್‌ ಎಂದು ತಿಳಿದುಬಂದಿದೆ.

ನೂರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಬುಲ್ಲಿ ಬಾಯ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಅಪ್ಲೋಡ್‌ ಮಾಡಿ, ಅವರನ್ನು ಮಾರಾಟಕ್ಕಿಡಲಾಗಿತ್ತು. ಈ ಸಂಬಂಧ ಬಂಧಿತಳಾಗಿರುವ 18 ವರ್ಷದ ಯುವತಿಯೇ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ತಿಳಿದು ಬಂದಿದೆ. ಮತ್ತೊಬ್ಬ ಆರೋಪಿಯನ್ನು ವಿಶಾಲ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಅಂದಹಾಗೆ 18 ವರ್ಷದ ಯುವತಿಯನ್ನು ಉತ್ತರಾಖಂಡ್‌ನಲ್ಲಿ ಬಂಧಿಸಲಾಗಿದೆ.  ಈ ಯುವತಿ ಮೂರು ಬುಲ್ಲಿಬಾಯ್‌ ಅಕೌಂಟ್‌ಗಳನ್ನು ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ವಿಶಾಲ್‌ ಕುಮಾರ್‌ ಖಲ್ಸಾ ಸುಪ್ರೀಮಸಿಸ್ಟ್‌ ಹೆಸರಿನಲ್ಲಿ ಅಕೌಂಟ್‌ ತೆರೆದಿದ್ದು, ಅದರ ಮೂಲಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದನೆಂದು ತಿಳಿದುಬಂದಿದೆ.

 

Share Post