ಬೆಳ್ಳಿತೆರೆಯಲ್ಲಿ ಬಾಡಿದ ʻಪುಷ್ಪʼಕ್ಕೆ ಒಟಿಟಿ ನೀರೆರೆಯುತ್ತಾ..?
ಹೈದರಾಬಾದ್ : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಪುಷ್ಪ ಸಿನಿಮಾ ಓಟಿಟಿ ಹೊಸ್ತಿಲಲ್ಲಿ ಸಜ್ಜಾಗಿ ನಿಂತಿದೆ. ಇದೇ ಜನವರಿ ೭ರಿಂದ ಪುಷ್ಪ ಪಾರ್ಟ್ ೧ ಸಿನಿಮಾವನ್ನು ನೀವು ಅಮೆಜಾನ್ ಪ್ರೈಮ್ ಅಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ರಕ್ತಚಂದನದ ಕಥೆ ಹೊಂದಿರುವ ಪುಷ್ಪ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅಲ್ಲು ಅರ್ಜುನ್ ಅವರ ಡಿಫರೆಂಟ್ ಮ್ಯಾನರಿಸಂ ಜನಕ್ಕೆ ಖುಷಿ ಕೊಟ್ಟಿತು. ಆದರೆ ಸಿನಿಮಾ ಏಕೋ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ವಾರದಲ್ಲಿ 200 ಕೋಟಿಗೂ ಹೆಚ್ಚು ಗಳಿಸಿತು ಎಂದು ಹೇಳಿಕೊಂಡರಾದರೂ ಸಿನಿಮಾ ಸೋತಿದೆ.
ಕೆ.ಜಿ.ಎಫ್ ಚಾಪ್ಟರ್ ೧ ಸಿನಿಮಾಗಿಂತ ೧೦ ಪಟ್ಟು ಚೆನ್ನಾಗಿದೆ ಎಂದು ಹೇಳಿಕೊಂಡಿದ್ದ ಚಿತ್ರತಂಡವನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಮಾಡಲಾಗಿತ್ತು. ಸಿನಿಮಾ ತುಂಬಾ ಲ್ಯಾಗ್ ಇದೆ, ಅಲ್ಲು ಅರ್ಜುನ್ ಬಿಟ್ಟರೆ ಬೇರೇನು ಚೆನ್ನಾಗಿಲ್ಲ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬಂದಿತ್ತು.
ಈಗ ಭಾರಿ ಮೊತ್ತ ಕೊಟ್ಟು ಅಮೆಜಾನ್ ಪ್ರೈಮ್ ಪುಷ್ಪ ಪಾರ್ಟ್ ೧ ಸಿನಿಮಾವನ್ನು ಖರೀದಿಸಿದೆ. ಜನವರಿ 7ರಂದು ರಾತ್ರಿ ೮ರಿಂದ ನೀವು ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಅಮೆಜಾನ್ ಪ್ರೈಮ್ ವೀಡಿಯೋ ತಂಡದವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ನೋಡಬಹುದು.