ಕಲಬೆರಕೆ ಕೊಕೇನ್ ಸೇವಿಸಿ 20 ಮಂದಿ ದುರ್ಮರಣ, 75 ಮಂದಿ ಅಸ್ವಸ್ಥ
ಅರ್ಜೆಂಟೀನಾ: ಕೊಕೇನ್ ವ್ಯಸನಕಾರಿ ಮಾತ್ರವಲ್ಲದೇ ಜೀವಕ್ಕೆ ಕೂಡ ಬಹಳ ಅಪಾಯಕಾರಿ. ಅದರಲ್ಲೂ ಕಲಬೆರಕೆ ಕೊಕೇನ್ ಸೇವಿಸುವವರ ಪರಿಸ್ಥಿತಿ ಕೇಳಬೇಕೆ..? ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಕಲಬೆರಕೆ ಕೊಕೇನ್ ಸೇವಿಸಿದ 20 ಜನರು ಸಾವನ್ನಪ್ಪಿದ್ದಾರೆ, 75ಕ್ಕೂ ಹೆಚ್ಚು ಮಂದಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯೂನಸ್ ಐರಿಸ್ನ ಸುತ್ತಮುತ್ತಲಿನ ಸುಮಾರು ಎಂಟು ನಗರಗಳಲ್ಲಿ ವಿಷಕಾರಿ ಕೊಕೇನ್ ಸೇವಿಸಿರುವ ಘಟನೆ ಬೆಳಕಿಗೆ ಬಂದಿದೆ.
ತೀವ್ರ ಅಸ್ವಸ್ಥರಾಗಿರುವ 75 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬ್ಯೂನಸ್ ಐರಿಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗಿದೆ ಜೊತೆಗೆ ಮಾದಕ ವಸ್ತು ಮಾರಾಟದಲ್ಲಿಯೂ ಇಲ್ಲಿನ ಗ್ಯಾಂಗ್ಗಳ ನಡುವೆ ಭಾರೀ ಪೈಪೋಟಿ ಇದೆ. ಇದು ಗುಂಪುಗಳ ನಡುವೆ ಘರ್ಷಣೆಗೂ ಕಾರಣವಾಗಿದೆ. ಡ್ರಗ್ಸ್ ಗ್ಯಾಂಗ್ಗಳ ನಡುವಿನ ಘರ್ಷಣೆಯಿಂದಾಗಿ ಉದ್ದೇಶಪೂರ್ವಕವಾಗಿ ಡ್ರಗ್ಸ್ ಅಲ್ಲಿ ಕಲಬೆರಕೆ ಮಾಡಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.
ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಹೆಚ್ಚಿನ ಅನಾಹುತಗಳನ್ನು ತಡೆಯಲು ವಿವಿಧೆಡೆ ತಪಾಸಣೆ ಕೇಂದ್ರಗಳನ್ನು ತೆರೆದಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಕೊಕೇನ್ ಬಳಕೆದಾರರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಹಾರ್ಲಿನ್ಹ್ಯಾಮ್, ಸ್ಯಾನ್ ಮಾರ್ಟಿನ್ ಮತ್ತು ಟ್ರೆಸ್ ಡಿ ಫ್ಯಾಬ್ರೆರೊ ನಗರಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿವೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬ್ಯೂನಸ್ ಐರಿಸ್ ರಕ್ಷಣಾ ಸಚಿವರು ಸಾರ್ವಜನಿಕರು ಕಳೆದ 24 ಗಂಟೆಗಳಲ್ಲಿ ಕೊಕೇನ್ ಖರೀದಿಸಿದ್ದರೆ ಅದನ್ನು ಬಳಸದಂತೆ ಎಚ್ಚರಿಕೆ ನೀಡದ್ದಾರೆ.