CrimeNational

ಫಲಕ್‌ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅನಾಹುತ

ಹೈದರಾಬಾದ್‌; ಫಲಕ್ ​​ನುಮಾ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಭೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಇತರೆ ಭೋಗಿಗಳಿಗೂ ವ್ಯಾಪಿಸಿದೆ.  ಹೌರಾದಿಂದ ಸಿಕಂದರಾಬಾದ್‌ಗೆ ಹೋಗುವ ಫಲಕ್‌ನುಮಾ ಎಕ್ಸ್‌ಪ್ರೆಸ್ ಬೆಳಿಗ್ಗೆ 10.30 ಕ್ಕೆ ಸಿಕಂದರಾಬಾದ್ ತಲುಪಲಿತ್ತು. ಆದ್ರೆ ಯಾದಾದ್ರಿ ಭುವನಗಿರಿ ಜಿಲ್ಲೆಯ ಭುವನಗಿರಿ ಮಂಡಲದ ಪಗಿಡಿಪಲ್ಲಿ-ಬೊಮ್ಮಾಯಿಪಲ್ಲಿ ತಲುಪಿದಾಗ ಎಸ್ 4 ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ರೈಲ್ವೆ ಮೂಲಗಳು ತಿಳಿಸಿವೆ.

ಬಳಿಕ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಬೆಂಕಿ ವ್ಯಾಪಿಸಿದ್ದು, ಇದುವರೆಗೆ ಒಟ್ಟು 5 ಬೋಗಿಗಳು ಸುಟ್ಟು ಕರಕಲಾಗಿವೆ. ರೈಲನ್ನು ನಿಲ್ಲಿಸಲಾಯಿತು ಮತ್ತು ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲಾ ಪ್ರಯಾಣಿಕರು ಕೆಳಗಿಳಿದರು ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇತರ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ.

ಅಗ್ನಿಶಾಮಕ ದಳಕ್ಕೆ ಸ್ಥಳಕ್ಕೆ ತಲುಪಲು ಸೂಕ್ತ ಮಾರ್ಗವಿಲ್ಲದ ಕಾರಣ ಬಹುಬೇಗ ಸ್ಥಳಕ್ಕೆ ಬರಲು ಆಗಲಿಲ್ಲ. ಹೀಗಾಗಿ ಬೆಂಕಿ ಇತರ ಬೋಗಿಗಳಿಗೂ ವ್ಯಾಪಿಸಿತು. ಬೋಗಿಗಳಿಂದ ಹೊಗೆ ಬರುತ್ತಿದ್ದರಿಂದ ಲೋಕೋಪೈಲಟ್ ರೈಲನ್ನು ನಿಲ್ಲಿಸಿದರು. ಪ್ರಯಾಣಿಕರು ರೈಲು ಇಳಿದು ಕೆಳಗೆ ನಿಂತಿದ್ದರು. ದಕ್ಷಿಣ ಮಧ್ಯ ರೈಲ್ವೆಯ ಜಿಎಂ ಘಟನೆಯ ಸ್ಥಳಕ್ಕೆ ತೆರಳಿದರು. ಅಲ್ಲಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಮತ್ತೊಂದು ವಿಶೇಷ ರೈಲು ಕಳುಹಿಸಲು ವ್ಯವಸ್ಥೆ ಮಾಡಲಾಯಿತು.

ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದೆಯೇ ಅಥವಾ ಇನ್ನಾವುದೇ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ ಎಂದರು. ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಕೆಳಗಿಳಿದಿದ್ದರಿಂದ ಬಹುತೇಕ ಲಗ್ಗೇಜುಗಳು ಉರಿಯುತ್ತಿರುವ ಬೋಗಿಗಳಲ್ಲೇ ಉಳಿದಿದ್ದವು. ಅವೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. 

Share Post