CrimeDistricts

ಯಾದಗಿರಿ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ಆರು ಮಂದಿ ಬಲಿ

ಯಾದಗಿರಿ; ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ಕು ಜನ ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲ್ಲೂಕಿನ ಅರಕೇರಾ (ಕೆ) ಬಳಿ ಗುರುವಾರ ರಾತ್ರಿ ನಡೆದಿದೆ. ಹೆಣ್ಣು ಮಗು ಸೇರಿ 6 ಜನ ಮೃತಪಟ್ಟಿದ್ದಾರೆ.

ಮಹ್ಮದ್ ವಾಜೀದ್ ಹುಸೇನ್(40), ಮಹ್ಮದ್ ನಜರ್ ಹುಸೇನ್ (76), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ (30), ಇಮ್ರಾನ್ (22), ಉಮೇಜಾ (5 ತಿಂಗಳು) ಮೃತಪಟ್ಟಿದ್ದಾರೆ. ಬಾಲಕ ಮಹ್ಮದ್ ಫಾಜೀಲ್ ಹುಸೇನ್ ಗಾಯಗೊಂಡಿದ್ದಾರೆ. ಬಾಲಕನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರೆಲ್ಲರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಕೊಡಂಗಲ್ ಸಮೀಪದ ಚಿತ್ಲಾಪಲ್ಲಿಯ ಹಜರತ್ ಅಬ್ದುಲ್ ಷಾ ದರ್ಗಾಕ್ಕೆ ಜವಳಕ್ಕಾಗಿ ತೆರಳಿದ್ದರು.

ದರ್ಗಾದಲ್ಲಿ ಜವಳ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ ಅರಕೇರಾ ಬಳಿ ದುರ್ಘಟನೆ ನಡೆದಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌, ಪಿಐ ದೌವಲತ್ ಕುರಿ ಭೇಟಿ ಪರಿಶೀಲನೆ ನಡೆದಿದ್ದಾರೆ. ಟಾಟಾ ಗೂಡ್ಸ್ ವಾಹನ (AP 12 W 1083) ಮತ್ತು ಹುಂಡೈ ಸ್ಯಾಂಟ್ರೊ ಕಾರು (KA 03 MB 1419) ನಡುವೆ ಅರಕೇರಾ (ಕೆ) ಸಿದ್ಧಾರೂಢ ಮಠದ ಬಳಿ ಅಪಘಾತ ಸಂಭವಿಸಿದೆ.‌ ಲಾರಿಯಲ್ಲಿ ಪೈಪ್‌ಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಮಾಹಿತಿ ಬರುತ್ತಿದ್ದಂತೆ ಇಆರ್‌ಎಸ್‌ಎಸ್‌ ಸಿಬ್ಬಂದಿ ಎಎಚ್ ಸಿ ವೀರಣ್ಣ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಮೃತರು ಹಟ್ಟಿಯ ಎಂಜಿ ರಸ್ತೆ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

Share Post