CinemaEconomyInternational

ಆಸ್ಕರ್‌ ಪ್ರಶಸ್ತಿ ಸಿಗಬೇಕೆಂದರೆ ಸಿನಿಮಾ ಪ್ರಮೋಷನ್‌ ಯಾವ ಮಟ್ಟದಲ್ಲಿರಬೇಕು..? ಅದಕ್ಕೆ ಎಷ್ಟು ಖರ್ಚಾಗುತ್ತೆ..?

ಚಿತ್ರರಂಗದಲ್ಲಿರುವವರ ಬಹುದೊಡ್ಡ ಕನಸು ಆಸ್ಕರ್‌… ಎಲ್ಲರೂ ಜೀವನದಲ್ಲೊಮ್ಮೆ ಆಸ್ಕರ್‌ ಅವಾರ್ಡ್‌ ಪಡೆಯಬೇಕು ಅಂತ ಕನಸು ಕಾಣುತ್ತಿರುತ್ತಾರೆ. ಆಸ್ಕರ್‌ ಅವಾರ್ಡ್‌ ಗಳಿಸೋದು ಅಂದರೆ ಪ್ರಪಂಚ ಚಿತ್ರರಂಗದಲ್ಲಿ ಅತ್ಯುನ್ನತ ಮಟ್ಟಕ್ಕೆ ಹೋಗೋದು ಅನ್ನೋದೇ ಎಲ್ಲರ ಭಾವನೆ.

ಕಳೆದ ಕೆಲ ತಿಂಗಳುಗಳಿಂದ ಭಾರತದಲ್ಲಿ ಆಸ್ಕರ್‌ ಫೀವರ್‌ ಜೋರಾಗಿದೆ. ಆರ್‌ಆರ್‌ಆರ್‌ ಸಿನಿಮಾದ ಯಶಸ್ಸು ಇದಕ್ಕೆ ಕಾರಣ. ಆರ್‌ಆರ್‌ಆರ್‌ ಸಿನಿಮಾ ಈ ಬಾರಿ ಆಸ್ಕರ್‌ ಪ್ರಶಸ್ತಿ ಬಾಚಿಕೊಳ್ಳಬಹುದು ಅಂತ ಭಾರತೀಯ ಚಿತ್ರರಂಗ ಭಾವಿಸುತ್ತಿದೆ. ಆಸ್ಕರ್‌ ಸಿನಿಮಾ ಭಾರತದಾದ್ಯಂತ ರಿಲೀಸ್‌ ಆಗಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆದ ದಿನದಿಂದ ಈ ಸಿನಿಮಾ ಆಸ್ಕರ್‌ ರೇಸ್‌ನಲ್ಲಿದೆ ಎಂಬ ಪ್ರಚಾರ ಶುರುವಾಯ್ತು. ಆರ್‌ಆರ್‌ಆರ್‌ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾ ಹಾಲಿವುಡ್‌ ಸೆಲೆಬ್ರಿಟಿಗಳು ಕೂಡಾ ಟ್ವೀಟ್‌ಗಳನ್ನು ಮಾಡಿದ್ದರಿಂದ ದೇಶದಲ್ಲಿ ಆಸ್ಕರ್‌ ಜಪ ಮತ್ತಷ್ಟು ಜೋರಾಗಿತ್ತು.

ಆಸ್ಕರ್‌ ಅವಾರ್ಡ್‌ಗಳಿಗೆ ಭಾರತದಿಂದ ಚೆಲ್ಲೋ ಷೋ ಎಂಬ ಗುಜರಾತಿ ಸಿನಿಮಾವನ್ನು ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಆಗ ಆರ್‌ಆರ್‌ಆರ್‌ಗೆ ಆಸ್ಕರ್‌ ಕೈತಪ್ಪಿತು ಎಂದೇ ಪ್ರಚಾರ ಶುರುವಾಗಿತ್ತು. ಆದ್ರೆ, ಕೊನೆಗೆ ಆರ್‌ಆರ್‌ಆರ್‌ ಆಸ್ಕರ್‌ ರೇಸ್‌ಗೆ ಇಳಿದಿದೆ. ಒರಿಜಿನಲ್‌ ಸಾಂಜ್‌ ವಿಭಾಗದಲ್ಲಿ ನಾಟು ನಾಟು ಹಾಡು ನಾಮಿನೇಟ್‌ ಆಗಿದೆ.

ಅಷ್ಟಕ್ಕೂ ಆಸ್ಕರ್‌ ರೇಸ್‌ನಲ್ಲಿ ಇಳಿಯುವುದು ಅಂದರೆ ಏನು..? ಒಂದು ಸಿನಿಮಾ ಆಸ್ಕರ್‌ವರೆಗೂ ಹೇಗೆ ಹೋಗುತ್ತೆ..? ಪ್ರಮೋಷನ್‌ಗೆ, ಕ್ಯಾಂಪೇನ್‌ಗೆ ಎಷ್ಟು ಖರ್ಚಾಗುತ್ತೆ..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋದೇ ಒಂದು ಕುತೂಹಲ.

ಆಸ್ಕರ್‌ ರೇಸ್‌ನಲ್ಲಿ ಇಳಿಯಬೇಕು ಅಂದ್ರೆ ಏನು ಮಾಡಬೇಕು ಗೊತ್ತಾ..?

ಒಂದು ಸಿನಿಮಾ ಆಸ್ಕರ್‌ ನಾಮಿನೇಷನ್‌ ಆಗಬೇಕು ಅಂದ್ರೆ, ಆ ಸಿನಿಮಾ ಪ್ರೊಡ್ಯೂಸರ್‌ ಅಥವಾ ಡಿಸ್ಟ್ರಿಬ್ಯೂಟರ್‌ ಆಸ್ಕರ್‌ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು. ಆಸ್ಕರ್‌ ಅಂದ್ರೆ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ ಆಫ್‌ ಆರ್ಟ್ಸ್‌ ಅಂಡ್‌ ಸೈನ್ಸಸ್‌. ಇಲ್ಲಿ ವಿದೇಶಿ ಚಿತ್ರಗಳಿಗಾಗಿ ಒಂದಷ್ಟು ನಿಯಮಗಳಿವೆ. ಆ ನಿಯಮ, ನಿಬಂಧನೆಗಳೇನು ಅನ್ನೋದನ್ನು ಆಸ್ಕರ್‌ ಅಕಾಡೆಮಿ ವೆಬ್‌ಸೈಟ್‌ನಲ್ಲಿ ವಿವರವಾಗಿ ಬರೆಯಾಲಾಗಿದೆ.

ಆಸ್ಕರ್‌ ಗೆ ನಾಮಿನೇಟ್‌ ಆಗಬೇಕಾದರೆ ಆ ಚಿತ್ರ ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿರಬೇಕು, 40 ನಿಮಿಷಕ್ಕಿಂತ ಹೆಚ್ಚಿನ ಡ್ಯೂರೇಷನ್‌ ಇರಬೇಕು, ಇಂಗ್ಲೀಷ್‌ ಸಬ್‌ ಟೈಟಲ್‌ಗಳು ಕಡ್ಡಾಯವಾಗಿ ಇರಬೇಕು. ಇನ್ನು ಪ್ರಸ್ತುತ ವರ್ಷದಿಂದ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಕೂಡಾ ಆಸ್ಕರ್‌ಗೆ ಅರ್ಜಿ ಸಲ್ಲಿಸೋಕೆ ಅನುಮತಿ ನೀಡಲಾಗಿದೆ. ದಾಕ್ಯುಮೆಂಟರಿ ಫೀಚರ್‌ ಫಿಲ್ಮ್‌ಸ್‌, ದಾಕ್ಯುಮೆಂಟರಿ ಶಾರ್ಟ್‌ ಫಿಲ್ಸ್ಸ್‌ ಕೂಡಾ ನಾಮಿನೇಷನ್‌ಗೆ ಕಳುಹಿಸಲು ಅವಕಾಶವಿದೆ. ಹೀಗೆ ಹಲವಾರು ನಿಮಯಗಳನ್ನು ಆಸ್ಕರ್‌ ಸಂಸ್ಥೆ ರೂಪಿಸಿದೆ.

ಇವೆಲ್ಲಾ ವಿವರಗಳನ್ನು ನೀಡಿ ಆಸ್ಕರ್‌ ಸಬ್ಮಿಷನ್‌ ಫಾರ್ಮ್‌ ತುಂಬಿ ಅದನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅಂದರೆ ಆಸ್ಕರ್‌ ನಿಬಂದನೆಗಳಿಗೆ ಒಳಪಟ್ಟಿರುವ ಪ್ರಪಂಚದ ಯಾವುದೇ ಭಾಷೆಯ ಸಿನಿಮಾನೇ ಆದರೂ ಆಸ್ಕರ್‌ ಅವಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಭಾರತ ದೇಶದಿಂದ ಫಿಲ್ಮ್‌ ಫೆಡರೇಷನ್‌ ಆಫ್‌ ಇಂಡಿಯಾ ಒಂದು ಸಿನಿಮಾವನ್ನು ಅಧಿಕೃತವಾಗಿ ಆಸ್ಕರ್‌ಗೆ ಕಳುಹಿಸುತ್ತದೆ. ಆ ವರ್ಷ ಬಿಡುಗಡೆಯಾದ ಎಲ್ಲಾ ಸನಿಮಾಗಳನ್ನೂ ಪರಿಶೀಲನೆ ಮಾಡಿ ಒಂದು ಬೆಸ್ಟ್‌ ಸಿನಿಮಾವನ್ನು ಫಿಲ್ಮ್‌ ಫೆಡರೇಷನ್‌ ಆಪ್‌ ಇಂಡಿಯಾ ರೂಪಿಸಿದ ಕಮಿಟಿ ಆಯ್ಕೆ ಮಾಡುತ್ತೆ. ಆ ಕಮಿಟಿ ಆಯ್ಕೆ ಮಾಡಿದ ಚಿತ್ರ ಆಸ್ಕರ್‌ ನಾಮಿನೇಷನ್‌ ರೇಸ್‌ನಲ್ಲಿ ಇಳಿಯುತ್ತೆ. 2023ರಲ್ಲಿ ಫಿಲ್ಮ್‌ ಫೆಡರೇಷನ್‌ ಆಫ್‌ ಇಂಡಿಯಾ ಕಮಿಟಿ ಗುಜರಾತಿನ ಚೆಲ್ಲೋ ಷೋ ಎಂಬ ಸಿನಿಮಾವನ್ನು ಆಯ್ಕೆ ಮಾಡಿ ಆಸ್ಕರ್‌ಗೆ ಕಳುಹಿಸಿದೆ.

ಇದರ ನಡುವೆ ನೇರವಾಗಿ ಕೂಡಾ ಆಸ್ಕರ್‌ ರೇಸ್‌ನಲ್ಲಿ ಇಳಿಯಬಹುದು. ಆರ್‌ಆರ್‌ಆರ್‌ ಚಿತ್ರ ಕೂಡಾ ಅದೇ ರೀತಿ ಸ್ವಂತವಾಗಿ ಆಸ್ಕರ್‌ ರೇಸ್‌ಗೆ ಇಳಿದಿದೆ. ಆರ್‌ಆರ್‌ಆರ್‌ ಅಲ್ಲದೆ ಕನ್ನಡದ ಕಾಂತಾರಾ, ವಿಕ್ರಾಂತ್‌ ರೋಣ, ಗಂಗೂಭಾಯ್‌, ಮಿ.ವಸಂತರಾವ್‌, ರಾಕೆಟ್ರಿ, ತುಜ್ಯಾ ಸಾಥಿ ಕಹೀ ಹೈ, ಇರವಿನ್‌ ನಿಳಲ್‌ ಸಿನಿಮಾಗಳು ಕೂಡಾ 2023ರ ಆಸ್ಕರ್‌ಗಾಗಿ ನಮ್ಮ ದೇಶದಿಂದ ಸ್ವಂತವಾಗಿ ರೇಸ್‌ನಲ್ಲಿ ಕಾಣಿಸಿಕೊಂಡಿವೆ. ಆದ್ರೆ ಆರ್‌ಆರ್‌ಆರ್‌ ಬಿಟ್ಟು ಈ ಯಾವ ಸಿನಿಮಾಗಳೂ ಕೂಡಾ ಯಾವ ವಿಭಾಗದಲ್ಲೂ ನಾಮಿನೇಟ್‌ ಆಗಿಲ್ಲ.

ಆಸ್ಕರ್‌ ನಾಮಿನೇಷನ್‌ ಹಾಗೂ ರೇಸ್‌ನಲ್ಲಿ ಉಳಿಯಲು ಚಿತ್ರವನ್ನು ಪ್ರಮೋಷನ್‌ ಮಾಡುವುದಕ್ಕೆ ಸಿನಿಮಾ ನಿರ್ಮಿಸಲು ಬೇಕಾದ ಬಡ್ಜೆಟ್‌ನಿಂದ ಹೆಚ್ಚಿನ ಖರ್ಚು ಆಗುತ್ತೆ.. ಸಿನಿಮಾ ಅಪ್ಲಿಕೇಷನ್‌ ವಿವರಗಳನ್ನೆಲ್ಲಾ ಆಸ್ಕರ್‌ ಆಕಾಡೆಮಿ ಪರಿಶೀಲನೆ ಮಾಡುತ್ತೆ. ಅನಂತರ ಆ ಚಿತ್ರ ನಾಮಿನೇಷನ್‌ಗೆ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ನಿರ್ಧಾರ ಮಾಡುತ್ತೆ.

ಇಲ್ಲಿಂದ ಶುರುವಾಗುತ್ತೆ ಅಸಲಿ ಕಥೆ… ಆಸ್ಕರ್‌ ರೇಸ್‌ನಲ್ಲಿ ಉಳಿಯಬೇಕು ಅಂದ್ರೆ ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ಕ್ಯಾಪೇನ್‌ ಮಾಡಬೇಕಾಗುತ್ತೆ.. ಪ್ರಮೋಷನ್ಸ್‌ಗೆ ಕೋಟಿ ಕೋಟಿ ಖರ್ಚು ಮಾಡಬೇಕು. 2016ರಲ್ಲಿ ವೆಟ್ರಿಮಾರನ್‌ ನಿರ್ದೇಶದಲ್ಲಿ ತಯಾರಾದ ವಿಚಾರಣೈ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ನಾಮಿನೇಷನ್‌ಗೆ ಹೋಗಿತ್ತು. ಆ ಸಮಯದಲ್ಲಿ ಆದ ತಮ್ಮ ಅನುಭವಗಳನ್ನು ನಿರ್ದೇಶಕ ವೆಟ್ರಿಮಾರನ್‌ ಹಂಚಿಕೊಂಡಿದ್ದರು. ಆಸ್ಕಾರ್‌ಗೆ ಸಿನಿಮಾವನ್ನು ಕಳುಹಿಸುವುದು ಸುಲಭದ ಕೆಲಸ ಅಲ್ಲ. ಸಿನಿಮಾ ಬಡ್ಜೆಟ್‌ಗಿಂತ ಹಲವು ಒಟ್ಟು ಹೆಚ್ಚು ಆಸ್ಕರ್‌ ನಾಮಿನೇಷನ್‌ಗಾಗಿ ಪ್ರಮೋಷನ್‌ ಮಾಡಲು ಖರ್ಚು ಮಾಡಬೇಕು ಎಂದು ಅವರು ಹೇಳಿಕೊಂಡಿದ್ದರು.

ಆಸ್ಕರ್‌ ನಾಮಿನೇಷನ್‌ಗೆ ಒಂದು ಸಿನಿಮಾ ಶಾರ್ಟ್‌ಲಿಸ್ಟ್‌ ಆದ ನಂತರ ಕ್ಯಾಂಪೇನ್‌ ಮಾಡೋದಕ್ಕಾಗಿ ಕನಿಷ್ಟ ಎರಡು ತಿಂಗಳ ಮುಂಚಿನಿಂದಲೇ ಆಸ್ಕರ್‌ ಅವಾರ್ಡ್‌ ನೀಡುವ ಸ್ಥಳ ಲಾಸ್‌ ಏಂಜಲೀಸ್‌ನಲ್ಲೇ ಮೊಕ್ಕಾಂ ಹೂಡಬೇಕು. ಆ ಖರ್ಚುಗಳೆಲ್ಲವೂ ನಮ್ಮವೇ.. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಒಂದು ಸಿನಿಮಾ ಪಿಆರ್‌ಒ ಒಬ್ಬರನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು.. ಆಸ್ಕರ್‌ನಲ್ಲಿ ವಿದೇಶ ಚಿತ್ರಗಳ ಬಗ್ಗೆ ಮಾಹಿತಿ ಇರುವ ಪಿಆರ್‌ಒನೇ ಆಗಿರಬೇಕು. ಇದು ಅತ್ಯಂತ ಪ್ರಮುಖ ವಿಚಾರ. ಆ ಅರ್ಹತೆ ಇರುವ ಪಿಆರ್‌ಒಗಳು ಲಾಸ್‌ ಏಂಜಲೀಸ್‌ನಲ್ಲಿ ಇಬ್ಬರು ಮೂವರು ಮಾತ್ರವೇ ಇದ್ದಾರೆ. ಆದ್ದರಿಂದ ಅವರು ಅಷ್ಟು ಸುಲಭವಾಗಿ ಸಿಗೋದಿಲ್ಲ.

ಆಸ್ಕರ್‌ ನಾಮಿನೇಷನ್‌ಗೆ ಶಾರ್ಟ್‌ ಲಿಸ್ಟ್‌ ಆಗುವುದಕ್ಕೆ ಪ್ರಮೋಷನ್‌ ಮಾಡುವುದಕ್ಕಾಗಿ ಕನಿಷ್ಟ ೧೨ ಲಕ್ಷ ರೂಪಾಯಿಗಳನ್ನು ಪಿಆರ್‌ಒಗೇ ನೀಡಬೇಕಾಗುತ್ತದೆ. ಒಂದು ವೇಳೆ ನಾಮಿನೇಟ್‌ ಆದರೆ ಮತ್ತೆ ನಾಲ್ಕು ಲಕ್ಷ ರೂಪಾಯಿ ನೀಡಬೇಕು. ಪಿಆರ್‌ಒಗೆ ಮಾತ್ರವೇ ಇಷ್ಟು, ಇನ್ನು ಪ್ರಮೋಷನ್‌ಗೆ ಇನ್ನೆಷ್ಟು ಖರ್ಚು ಮಾಡಬೇಕು ನೀವೇ ಲೆಕ್ಕ ಹಾಕಿ.

ಪ್ರಮೋಷನ್‌ಗಾಗಿ ಲಾಸ್‌ ಏಂಜಲೀಸ್‌ನಲ್ಲಿ ಪಾರ್ಟಿಗಳು, ಕಾರ್ಯಕ್ರಮಗಳನ್ನು ಮಾಡಬೇಕು. ಲಾಬಿ ಮಾಡಬೇಕು. ಇದಕ್ಕೆ ಸಾವಿರಾರು ಡಾಲರ್‌ಗಳು ಖರ್ಚು ಮಾಡಬೇಕಾಗುತ್ತದೆ. ಇನ್ನು ಆಸ್ಕರ್‌ಗೆ ನಾಮಿನೇಟ್‌ ಆಗಬೇಕು ಅಂದ್ರೆ ಲಾಸ್‌ ಏಂಜಲೀಸ್‌ನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಬೇಕು. ವೆರೈಟಿ, ದಿ ಹಾಲಿವುಡ್‌ ರಿಪೋರ್ಟರ್‌ ನಂತಹ ಪ್ರಮುಖ ಪತ್ರಿಕೆಗಳಲ್ಲಿ ನಮ್ಮ ಸಿನಿಮಾ ಬಗ್ಗೆ ಜಾಹೀರಾತು ನೀಡಬೇಕು. ಈ ಎರಡೂ ಪತ್ರಿಕೆಗಳನ್ನು ಜಾಹೀರಾತು ನೀಡಬೇಕಂದರೆ ಕನಿಷ್ಟ ಎಂದರೂ ೨೭ ಲಕ್ಷ ರೂಪಾಯಿ ಖರ್ಚಾಗುತ್ತೆ.

ಇನ್ನು ಅತಿಥಿಗಳನ್ನು ಆಹ್ವಾನಿಸಿ ಅವರಿಗಾಗಿ ಥಿಯೇಟರ್‌ನಲ್ಲಿ ನಮ್ಮ ಚಿತ್ರ ಪ್ರದರ್ಶನ ಏರ್ಪಡಿಸಬೇಕು. ಅದಕ್ಕಾಗಿ ಥಿಯೇಟರ್‌ ಬಾಡಿಗೆಗೆ ಪಡೆಯಬೇಕಾಗುತ್ತದೆ. ಅತಿಥಿಗಳಿಗೆ ರಾಜಮರ್ಯಾದೆ ಮಾಡಬೇಕಾಗುತ್ತದೆ. ಹೀಗೆ ಕ್ಯಾಂಪೇನ್‌ ಮಾಡೋದಕ್ಕೆ ಅನೇಕ ವಿಧಾನಗಳಿವೆ. ಅವೆಲ್ಲವನ್ನೂ ಮಾಡಬೇಕಾಗುತ್ತದೆ. ಅದಕ್ಕಾಗಿ ಲಕ್ಷ ಲಕ್ಷ ಡಾಲರ್‌ ಖರ್ಚಾಗುತ್ತೆ. ಇದೆಲ್ಲವನ್ನೂ ಮಾಡಬೇಕಾದರೆ ನಾವು ಸಿನಿಮಾ ನಿರ್ಮಿಸಲು ಮಾಡಿದ ಖರ್ಚಿಗಿಂತ ಹಲವು ಪಟ್ಟು ಹೆಚ್ಚು ಹಣ ಬೇಕಾಗುತ್ತದೆ. ಆರ್‌ಆರ್‌ಆರ್‌ ಚಿತ್ರತಂಡ ಈ ಬಾರಿ ಇಂತಹ ದುಬಾರಿ ಖರ್ಚುಗಳನ್ನು ಮಾಡಿ ಪ್ರಮೋಟ್‌ ಮಾಡಿದೆ. ಹೀಗಾಗಿ ಅದು ಆಸ್ಕರ್‌ಗೆ ನಾಮಿನೇಟ್‌ ಆಗಿದೆ.

ಪ್ರಮೋಷನ್‌ಗೆ 80 ಕೋಟಿಗೂ ಹೆಚ್ಚು ಹಣ ಬೇಕು..!

ಒಂದು ಸಿನಿಮಾ ಬಿಡುಗಡೆ ಮಾಡಬೇಕು ಅಂದ್ರೆ ಅದಕ್ಕೆ ಮೊದಲು ಮಾರ್ಕೆಟಿಂಗ್‌ ಹೇಗೆ ಮಾಡುತ್ತಾರೋ ಹಾಗೆಯೇ ಆಸ್ಕರ್‌ ನಾಮಿನೇಷನ್‌ ಗಾಗಿ ಮಾರ್ಕೆಟಿಂಗ್‌ ಮಾಡಬೇಕು. ಆಸ್ಕರ್‌ ಕ್ಯಾಂಪೇನ್‌ಗೆ ೩ ಮಿಲಿಯನ್‌ ಡಾಲರ್‌ಗಳಿಂದ ೧೦ ಮಿಲಿಯನ್‌ ಡಾಲರ್‌ ವರೆಗೂ ಖರ್ಚು ಆಗಬಹುದು ಎಂದು ವೆರೈಟಿ ಮೀಡಿಯಾ ಸಂಸ್ಥೆ ೨೦೧೬ರಲ್ಲಿ ನಡೆಸಿದ ಒಂದು ಅಧ್ಯಯನದಿಂದ ಗೊತ್ತಾಗಿದೆ.

ಪಿಆರ್‌ಒಗೆ ೧೨ ಲಕ್ಷ ರೂಪಾಯಿ, ನಾಮಿನೇಷನ್‌ ಮೊದಲ ಜಾಹೀರಾತಿಗೆ ೮ ಕೋಟಿ, ನಾಮಿನೇಷನ್‌ ನಂತರ ಜಾಹೀರಾತಿಗೆ ೬ ಕೋಟಿ ರೂಪಾಯಿ ಖರ್ಚು ಮಾಡಬೇಕು. ಟಿವಿ ಕಮರ್ಷಿಯಲ್‌ ಹಾಗೂ ಪ್ರೋಮೋಗಳಿಗೆ ೧೨ ಕೋಟಿ ರೂಪಾಯಿವರೆಗೂ ಖರ್ಚು ಮಾಡಬೇಕು. ಸಿನಿಮಾ ಪ್ರದರ್ಶನ ಸೇರಿ ಟ್ಯಾಲೆಂಟ್‌ ಕಾಸ್ಟ್‌ಗೆ ೧ ಕೋಟಿ ರೂಪಾಯಿಗೂ ಅಧಿಕ ಖರ್ಚಾಗುತ್ತೆ. ಇನ್ನು ಡಿವಿಟಿ ಹಾಗೂ ಡಿಜಿಟಲ್‌ ಸ್ಕ್ರೀನಿಂಗ್‌ಗೆ ಎರಡೂವರೆ ಕೋಟಿ ರೂಪಾಯಿಯಷ್ಟು ಖರ್ಚಾಗುತ್ತೆ. ಇನ್ನು ಈ ವೇಳೆಯಲ್ಲಿ ಇತರ ಅವಾರ್ಡ್‌ಗಳನ್ನು ಪಡೆಯುವುದಕ್ಕಾಗಿ ಮಾಡುವ ಖರ್ಚು ನಾಲ್ಕು ಕೋಟಿ ರೂಪಾಯಿ ದಾಟುತ್ತದೆ. ಗೋಲ್ಡೆನ್‌ ಗ್ಲೋಬ್‌ ಅವಾರ್ಡ್‌ಗಳಂತ ಪ್ರಶಸ್ತಿಗಳು ಕೂಡಾ ಆಸ್ಕರ್‌ ನಾಮಿನೇಷನ್‌ ಗೆ ಪ್ರಚಾರದ ಭಾಗವಾಗುತ್ತವೆ. ಆರ್‌ಆರ್‌ಆರ್‌ ಚಿತ್ರ ಪ್ರಚಾರಕ್ಕೂ ಎಂಬತ್ತು ಕೋಟಿ ರೂಪಾಯಿವರೆಗೂ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಆಸ್ಕರ್‌ ಆಯ್ಕೆಗೆ ವೋಟಿಂಗ್‌ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಈ ವರ್ಷ 95ನೇ ಆಸ್ಕರ್‌ ಅಕಾಡೆಮಿ ಅವಾರ್ಡ್‌ಗಳಿಗೆ ನಾಮಿನೇಷನ್‌ ಲಿಸ್ಟ್‌ ರಿಲೀಸ್‌ ಆಗಿದೆ. ಅದರಲ್ಲಿ ಆರ್‌ಆರ್‌ಆರ್‌ ಸಿನಿಮಾ ಕೂಡಾ ಇದೆ. ನಾಮಿನೇಷನ್‌ಗೆ ಆಯ್ಕೆಯಾದ ಸಿನಿಮಾಗಳೆಲ್ಲವನ್ನೂ ಅಕಾಡೆಮಿ ಸದಸ್ಯರು ನೋಡುತ್ತಾರೆ. ಅವಾರ್ಡ್‌ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವವರು ಆ ಸದಸ್ಯರು ನೀಡುವ ಮತಗಳೇ. ೨೦೨೩ರಲ್ಲಿ ಈ ಅಕಾಡೆಮಿಯಲ್ಲಿ ಸುಮಾರು ಹತ್ತು ಸಾವಿರ ಮಂದಿ ವೋಟರ್‌ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಒಂದೊಂದು ವಿಭಾಗಕ್ಕೆ ಸೇರಿದ ವೋಟರ್‌ಗಳು ಸೆಪರೇಟಾಗಿರುತ್ತಾರೆ. ಅವರೆಲ್ಲಾ ಅವರವರ ವಿಭಾಗದ ಸಿನಿಮಾವನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಬೆಸ್ಟ್‌ ಮೂವಿ ಅವಾರ್ಡ್‌ಗೆ ಮಾತ್ರ ಎಲ್ಲರೂ ಮತ ಹಾಕುತ್ತಾರೆ. ಸದಸ್ಯರು ಸಿನಿಮಾ ಒಂದರಿಂದ ಹತ್ತರ ಒಳಗೆ ನಂಬರ್‌ ನೀಡಬೇಕು. ಹೀಗೆ ನೀಡಿದ ರ್ಯಾಂಕಿಂಗ್‌ ಆಧಾರದ ಮೇಲೆ ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಇದೇ ಮಾರ್ಚ್‌ ೧೨ರಂದು ಆಸ್ಕರ್‌ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ. ಇದರಲ್ಲಿ ಆರ್‌ಆರ್‌ಆರ್‌ ಕೂಡಾ ಪ್ರಶಸ್ತಿ ಗಳಿಸುತ್ತಾ ಅನ್ನೋದ ಕಾದು ನೋಡಬೇಕು. ಏನೇ ಆಗಲೀ, ಆರ್‌ಆರ್‌ಆರ್‌ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿ, ಆಸ್ಕರ್‌ ನಾಮಿನೇಷನ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಆ ತಂಡಕ್ಕೆ ಶುಭ ಹಾರೈಸೋಣ..

Share Post