Cinema

ಮಹೇಶ್‌ ಬಾಬುಗೆ ನಾಯಕಿ ನಟಿಯಾಗಿ ಶ್ರೀಲೀಲಾ ಆಯ್ಕೆ ಮಾಡಿದ್ರಾ ತ್ರಿವಿಕ್ರಮ್‌..?

ಹೈದರಾಬಾದ್:‌ ರಾಘವೇಂದ್ರ ರಾವ್ ನಿರ್ದೇಶನದ ‘ಪೆಳ್ಳಿ ಸಂದಡಿ’ ಚಿತ್ರದ ನಾಯಕಿಯಾಗಿ ಶ್ರೀಲೀಲಾ ಹಾಗೂ ನಾಯಕ ನಟನಾಗಿ ರೋಷನ್ ಕುಮಾರ್ ನಟಿಸಿದ್ರು. ಕಳೆದ ವರ್ಷ ದಸರಾಗೆ ತೆರೆಕಂಡಿದ್ದ ಈ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ.  ಆದರೆ ಈ ಸಿನಿಮಾದ ಮೂಲಕ ನಾಯಕಿ ಶ್ರೀಲೀಲಾ ತೆಲುಗಿನಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳ ಮೂಲಕ ಮನೆಮಾತಾಗಿರುವ ಶ್ರೀಲೀಲಾ ಈಗ ತೆಲುಗಿನಲ್ಲಿ ಬಂಪರ್‌ ಆಫರ್‌ಗಳನ್ನು ದಕ್ಕಿಸಿಕೊಂಡಿದ್ದಾರೆ.

‘ಪೆಳ್ಳಿ ಸಂದಡಿʼ ಚಿತ್ರದ ನಂತರ ಶ್ರೀಲೀಲಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬಂದಿವೆ. ಸದ್ಯ ರವಿತೇಜ ಜೊತೆ ‘ಧಮಾಕಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ‘ಅನಗನಗ ಒಕರಾಜು’ ಸಿನಿಮಾದಲ್ಲೂ ನವೀನ್ ಪೊಲಿಶೆಟ್ಟಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿಯೂ ಮತ್ತೊಂದು ಚಿತ್ರವೂ ಕೈ ಹಿಡಿದಿದೆಯಂತೆ. ಇದೀಗ ಭರ್ಜರಿ ಆಫರ್‌ ಬಂದಿರುವುದಾಗಿ ಸುದ್ದಿಯಾಗಿದೆ.

ತ್ರಿವಿಕ್ರಮ್-ಮಹೇಶ್ ಬಾಬು ಕಾಂಬೋದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ # SSMB28 ಇದರಲ್ಲಿ ಶ್ರೀಲೀಲಾಗೆ ಅವಕಾಶ ಸಿಕ್ಕಿದೆಯಂತೆ. ಈಗಾಗಲೇ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ನಿರ್ಮಾಣದ ಪೂಜಾ ಕಾರ್ಯಕ್ರಮಗಳು ಕೂಡಾ ನಡೆದಿವೆ. ತ್ರಿವಿಕ್ರಮ್ ಡೈರೆಕ್ಷನ್‌ನಲ್ಲಿ ಬರುವ ಬಹುತೇಕ ಸಿನಿಮಾಗಳಲ್ಲಿ ಇಬ್ಬರು ನಾಯಕಿಯರಿರುತ್ತಾರೆ. ಹಾಗಾಗಿ ತ್ರಿವಿಕ್ರಮ್ ಮಹೇಶ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬರುವುದೊಂದೇ ಬಾಕಿಯಿದೆ ಎನ್ನಲಾಗಿದೆ.

Share Post