Cinema

ರಾಜ್ಯದಲ್ಲಿ ಜೇಮ್ಸ್‌ ಸಂಭ್ರಮ: ಥಿಯೇಟರ್‌ಗಳಲ್ಲಿ ಅಭಿಮಾನಿಗಳಿಂದ ಅಪ್ಪುಗೆ ಕಣ್ಣೀರ ಸ್ವಾಗತ

ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ರು. ಅವರ ನಿಧನ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಪುನೀತ್ ಅಭಿಮಾನಿಗಳು ಅವರ ಕೊನೆಯ ಚಿತ್ರ ‘ಜೇಮ್ಸ್’ಗಾಗಿ ಕಾತರದಿಂದ ಕಾದಿದ್ರು. ನಿರೀಕ್ಷೆಯಂತೆಯೇ ಇಂದು ಮಾರ್ಚ್ 17 ರ ಪುನೀತ್ ಹುಟ್ಟುಹಬ್ಬದಂದೇ ‘ಜೇಮ್ಸ್’ ಚಿತ್ರ ಬಿಡುಗಡೆಯಾಗಿದೆ.

ಜೇಮ್ಸ್ ಚಿತ್ರ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 60 ಕೋಟಿ ಬಜೆಟ್‌ನ ಈ ಚಿತ್ರವು 80 ಕೋಟಿಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ವಿಶ್ವಾದ್ಯಂತ ಸುಮಾರು 4,000 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕಟೌಟ್, ಬ್ಯಾನರ್, ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಅಭಿಮಾನ ವ್ಯಕ್ತಪಡಿಸಿದ್ದಾರೆ. ಈ ವಾರಾಂತ್ಯದವರೆಗೂ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.

ಈ ನಡುವೆ ಅಭಿಮಾನಿಗಳು ಥಿಯೇಟರ್‌ನಲ್ಲಿ ತಮ್ಮ ನೆಚ್ಚಿನ ನಾಯಕ ನಟನನ್ನ ಕಂಡು ಕಣ್ಣೀರು ಸುರಿಸುತ್ತಿದ್ದಾರೆ. ಒಂದೆಡೆ ಪುನೀತ್ ಸಾಹಸ ದೃಶ್ಯಗಳನ್ನು ನೋಡಿ ಖುಷಿಪಟ್ಟರೆ, ಇನ್ನೊಂದೆಡೆ ಪುನೀತ್ ಕೊನೆಯ ಸಿನಿಮಾ ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಪುನೀತ್ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಬಹುತೇಕ ಥಿಯೇಟರ್‌ಗಳಲ್ಲಿ ಇದೇ ನಡೆಯುತ್ತದೆ. ಪುನೀತ್ ಅವರನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಅಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share Post