Cinema

19.20.21 ಮಂಸೋರೆ ಅವರ ಹೊಸ ಚಿತ್ರ

ಬೆಂಗಳೂರು : ಸದಾಭಿರುಚಿಯ ಸಿನಿಮಾ ನೀಡೋದ್ರಲ್ಲಿ ಮಂಸೋರೆ ಎತ್ತಿದ ಕೈ. ನಾತಿಚರಾಮಿ, act 1978 ನಂತಹ ಜನ ಮೆಚ್ಚಿದ ಸಿನಿಮಾ ನೀಡಿದ್ದ ಮಂಸೋರೆ ಈಗ ಮತ್ತೊಂದು ಡಿಫರೆಂಟ್‌ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸಿನಿಮಾದ ಶೀರ್ಷಿಕೆ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

ಸದ್ಯ ಸಿನಿಮಾ ಪೋಸ್ಟರ್‌ಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾಗಿರುವ ಮಂಸೋರೆ ಅವರು ತಮ್ಮ ಮುಂದಿನ ಸಿನಿಮಾ ಅಬ್ಬಕ್ಕ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ 19.20.21 ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಸೋರೆ ಅವರು ಈ ರೀತಿ ಬರೆದು ಕೊಂಡಿದ್ದಾರೆ

ಸ್ನೇಹಿತರೇ ಹಾಗೂ ಸಿನಿಪ್ರಿಯರೇ,
ನಾವು ಈ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದ ನನ್ನ ಬಹುವರ್ಷಗಳ ಕನಸು ‘ಅಬ್ಬಕ್ಕ’ ಸಿನಿಮಾ ಮಾಡುವ ಯೋಜನೆಯನ್ನು ಕೊರೋನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ.
ಮುಂದೆ????
ಉತ್ತರ – “19.20.21”
ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು, ಸಿನಿಮಾನೇ ನಮ್ಮ ಜೀವನ. ಸಿನಿಮಾ ಕನಸು ಕಾಣದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ನಮಗೇ ಅಸಾಧ್ಯ. ಹಾಗಾಗಿ, ‘ಅಬ್ಬಕ್ಕ’ ಯೋಜನೆಯ ಕನಸಿನ ಜೊತೆಜೊತೆಗೆ ಈ ಕೊರೋನಾ ಕಾಲದಲ್ಲಿ, ವರ್ಷ ಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಬಹಳ ಕಷ್ಟವೆನಿಸಿದರೂ, ಆ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು.
ಅದರ ಫಲವೇ ಈಗ ಹೊಸ ಸಿನಿಮಾ, ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತ. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ.‌ ಈ ವರ್ಷವೇ ಸಿನಿಮಾನ ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. “ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು…” ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು.. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಕುರಿತಾಗಿ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ. ನಿಮ್ಮ ಪ್ರೀತಿಯ ಹಾರೈಕೆ ಮತ್ತು ಬೆಂಬಲದ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ.
ಧನ್ಯವಾದಗಳು.
ಇಂತಿ ನಿಮ್ಮ
ಮಂಸೋರೆ,
ಹಾಗೂ ಚಿತ್ರತಂಡ
ಹತ್ತೊಂಬತ್ತು ಇಪ್ಪತ್ತು ಇಪ್ಪತ್ತೊಂದು
Nineteen Twenty TwentyOne
ಮತ್ತು ತಂಡದವರು.
Share Post