ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ; 60 ಮಂದಿ ವಶಕ್ಕೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು. ಈ ಪ್ರಕರಣದ ಸಂಬಂಧ 60ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅವರನ್ನು ಈಗ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಮನೆಗಳ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರವತ್ತಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರದಲ್ಲಿ ಕಲ್ಲು ತೂರಾಟ ನಡೆದಿತ್ತು. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆಗಿತ್ತು. ಘಟನೆಯಲ್ಲಿ ಏಳು ಮನೆಗಳು, 1 ಕಾರು ಹಾಗೂ ಒಂದು ಬೈಕ್ ಜಖಂಗೊಂಡಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ಅಂದಹಾಗೆ ಸೆ.28ಕ್ಕೆ ಈದ್ ಮಿಲಾದ್ ಇತ್ತು. ಆದ್ರೆ ಅಂದೇ ಗಣೇಶ ವಿಸರ್ಜನೆ ಇದ್ದಿದ್ದರಿಂದ ಈದ್ ಮಿಲಾದ್ ಮೆರವಣಿಗೆಯನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ನಿನ್ನೆ ಶಿವಮೊಗ್ಗ ತುಂಬಾ ಹಸಿರು ಬಾವುಟಗಳನ್ನು ಹಾಕಲಾಗಿತ್ತು. ಟಿಪ್ಪು ಸುಲ್ತಾನ್, ಔರಂಗಾಜೇಬ್‌ನ ಕಟೌಟ್‌ಗಳನ್ನು ಹಾಕಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮೆರವಣಿಗೆ ಹೊರಟಿತ್ತು. ಅದು ರಾಗಿಗುಡ್ಡದ ಬಳಿ ಮೆರವಣಿಗೆ ಸಾಗುವ ವೇಳೆ ಈ ದುರ್ಘಟನೆ ನಡೆದಿದೆ.