BengaluruNational

ಬೆಂಗಳೂರಿನಲ್ಲಿ ಭಾರಿ ಶಬ್ದ; ಉದ್ಯಾನನಗರಿಯಲ್ಲಿ ಕಂಪಿಸಿತಾ ಭೂಮಿ..?

ಬೆಂಗಳೂರು: ಉದ್ಯಾನನಗರಿಯ ಮೈಸೂರು ರಸ್ತೆಯಲ್ಲಿ ಕೆಲ ತಿಂಗಳ ಹಿಂದೆ ಭಾರಿ ಶಬ್ದ ಕೇಳಿಸಿತ್ತು. ಇದೀಗ ಮತ್ತೆ ಅದೇ ರೀತಿಯ ಶಬ್ದ ಕೇಳಿಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿ ಹಾಗೂ ಮೈಸೂರು ರಸ್ತೆಯ ಕೆಲ ಪ್ರದೇಶಗಳಲ್ಲಿ ಭಾರೀ ಶಬ್ದ ಕೇಳಿದೆ. ಜೊತೆಗೆ ಮನೆಯಲ್ಲಿನ ಪಾತ್ರೆ, ಪಗಡೆಗಳು ಕೆಳಗೆ ಬಿದ್ದಿವೆ. ಇದನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.

ಬೆಂಗಳೂರು ಅಷ್ಟೇ ಅಲ್ಲದೆ, ರಾಮನಗರ, ಮಂಡ್ಯ ಭಾಗದಲ್ಲೂ ಈ ರೀತಿಯ ಶಬ್ದ ಕೇಳಿಬಂದಿದೆ. ಭೂಮಿ ಅಲುಗಾಡಿದ ಅನುಭವ ಆಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಧ್ಯಾಹ್ನ 11.50 ಹಾಗೂ 12.15ರ ಸಮಯದಲ್ಲಿ ಭಾರೀ ಶಬ್ದ ಕೇಳಿಸಿದೆ.

ಭಾರತ-ಮ್ಯಾನ್ಮಾರ್‌ ಗಡಿಯಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪನವಾಗಿತ್ತು. ಹೀಗಾಗಿ ಬೆಂಗಳೂರಿನಲ್ಲೂ ಭೂಕಂಪನ ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಬಗ್ಗೆ ರಿಕ್ಟರ್‌ ಮಾಪಕಗಳಲ್ಲಿ ಈ ಬಗ್ಗೆ ಯಾವುದೇ ವರದಿ ದಾಖಲಾಗಿಲ್ಲ ಎಂದು ಕೆಎಸ್‌ಎನ್‌ಡಿಸಿಎಂ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇದು ಭೂಕಂಪನದಿಂದ ಉಂಟಾದ ಶಬ್ದವಲ್ಲ.

ಬಾಂಬ್‌ ಸ್ಫೋಟಿಸಿದಂತೆ ಶಬ್ದ ಬಂತು. ಈ ವೇಳೆ ಮನೆಯಲ್ಲಿನ ವಸ್ತುಗಳು ಅಲುಗಾಡಿದವು. ಎಲ್ಲರೂ ಮನೆಯಿಂದ ಭಯದಿಂದ ಹೊರಬಂದರು ಎಂದು ಕಗ್ಗಲೀಪುರದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಜ್ಞಾನಭಾರತಿ ಬಳಿ ನಿಂತಿದ್ದ ವಿದ್ಯಾರ್ಥಿಗಳಿಗೂ ಇದೇ ರೀತಿಯ ಅನುಭವವಾಯಿತೆಂದು ತಿಳಿದುಬಂದಿದೆ.

Share Post